ನವದೆಹಲಿ: 2023 ರ ಸಾಲಿನ 49 ನೇ ಕಿಂಗ್ಸ್ ಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಹಿರಿಯರ ಫುಟ್ಬಾಲ್ ತಂಡವು ಇರಾಕ್ ವಿರುದ್ಧ ಸೆ.7 ರಂದು ಸೆಣಸಾಡಲಿದೆ. ಥಾಯ್ಲೆಂಡ್ನ ಚಿಯಾಂಗ್ ಮಾಯ್‌ನಲ್ಲಿರುವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಅದೇ ದಿನ ಸಂಜೆ ನಡೆಯಲಿರುವ 2ನೇ ಸೆಮೀಸ್ನಲ್ಲಿ ಆತಿಥೇಯ ಥಾಯ್ಲೆಂಡ್ನ ಮತ್ತು ಲೆಬನಾನ್ ಎದುರಾಗಲಿವೆ.
ಥಾಯ್ಲೆಂಡ್ ಫುಟ್‌ಬಾಲ್ ಅಸೋಸಿಯೇಷನ್ ಆಯೋಜಿಸುವ ವಾರ್ಷಿಕ ಕ್ರೀಡಾಕೂಟದ ಸೆಮಿಫೈನಲ್ ತಂಡಗಳನ್ನು ಬುಧವಾರ 'ಡ್ರಾ' ಮೂಲಕ ನಿರ್ಧರಿಸಲಾಯಿತು. ಥಾಯ್ಲೆಂಡ್ v/s ಲೆಬನಾನ್, ಭಾರತ v/s ಇರಾಕ್ ನಡುವೆ ಫೈನಲ್ ಟಿಕೆಟ್ಗಾಗಿ ಕಾದಾಟ ನಡೆಯಲಿದೆ. ಸೆಪ್ಟೆಂಬರ್ 7 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಅಲ್ಲಿ ಗೆದ್ದವರು ಸೆಪ್ಟೆಂಬರ್ 10 ರಂದು ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಎರಡು ಸೆಮಿಫೈನಲ್‌ಗಳಲ್ಲಿ ಸೋತವರು ಸೆಪ್ಟೆಂಬರ್ 10 ರಂದು ಮೂರನೇ ಸ್ಥಾನಕ್ಕಾಗಿ ಪ್ಲೇಆಫ್‌ನಲ್ಲಿ ಆಡಲಿದ್ದಾರೆ.
ಇರಾಕ್ ವಿರುದ್ಧ ಕೊನೆಯ ಬಾರಿಗೆ 2010 ರಲ್ಲಿ ಬಾಗ್ದಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಎದುರಿಸಿತ್ತು. ಆಗ 0-2 ರಲ್ಲಿ ಸೋಲು ಕಂಡಿತ್ತು. ಅದಾದ ಬಳಿಕ ಇತ್ತಂಡಗಳ ಮಧ್ಯೆ ಮತ್ತೊಂದು ಪಂದ್ಯ ನಡೆಯುತ್ತಿದೆ. ಟೂರ್ನಿಯಲ್ಲಿ ಇರಾಕ್ ತಂಡ(70) ಹೆಚ್ಚಿನ ಶ್ರೇಯಾಂಕ ಹೊಂದಿದೆ. ಭಾರತ 99 ನೇ ರ್ಯಾಂಕ್, ಆತಿಥೇಯ ಥಾಯ್ಲೆಂಡ್ 113, ಲೆಬನಾನ್ 100ನೇ ಶ್ರೇಯಾಂಕದಲ್ಲಿದೆ.
ಪಂದ್ಯಾವಳಿಯಲ್ಲಿ ನಾಲ್ಕನೇ ಸಲ ಭಾಗಿ: ಇನ್ನು ಭಾರತ ಫುಟ್ಬಾಲ್ ತಂಡ ಕಿಂಗ್ಸ್ ಕಪ್ ಪಂದ್ಯಾವಳಿಯಲ್ಲಿ ನಾಲ್ಕನೇ ಸಲ ಭಾಗವಹಿಸಿದೆ. ಕಡೆಯ ಬಾರಿ 2019 ರಲ್ಲಿ ಪಾಲ್ಗೊಂಡಿದ್ದಾಗ ಸೆಮಿಫೈನಲ್‌ನಲ್ಲಿ ಕೊರಾಕೊ ತಂಡದ ಎದುರು 1-0 ಗೋಲಿನಿಂದ ಸೋಲು ಕಂಡಿತ್ತು. ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇಆಫ್ ಪಂದ್ಯದಲ್ಲಿ ಆತಿಥೇಯ ಥಾಯ್ಲೆಂಡ್ನ ವಿರುದ್ಧ 1-0 ಗೋಲಿನೊಂದಿಗೆ ಗೆದ್ದು ಕಂಚಿನ ಪದಕ ಗೆದ್ದಿತ್ತು.
1977 ರಲ್ಲಿ ನಡೆದ ಕಿಂಗ್ಸ್ ಕಪ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಭಾರತ ಕಂಚಿನ ಪದಕವನ್ನು ಪಡೆದುಕೊಂಡಿತ್ತು. ಟೂರ್ನಿಯಲ್ಲಿ ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾದಂತಹ ತಂಡಗಳನ್ನು ಸೋಲಿಸಿತ್ತು. 1981 ರಲ್ಲಿ ಎರಡನೇ ಸಲ ಪಾಲ್ಗೊಂಡು ಗುಂಪು ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದಿತ್ತು.
ತರಬೇತುದಾರ ಇಗೊರ್ ಸ್ಟಿಮ್ಯಾಕ್ ನೇತೃತ್ವದಲ್ಲಿ ಭಾರತ ಪುರುಷರ ಫುಟ್ಬಾಲ್ ತಂಡ ಪಳಗಿದ್ದು, ಹೆಚ್ಚು ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದೆ. ಟೂರ್ನಿಯಲ್ಲಿ ತನಗಿಂತ ಉತ್ತಮ ಶ್ರೇಯಾಂಕ ಹೊಂದಿರುವ ಇರಾನ್ ವಿರುದ್ಧ ಇದೇ ವಿಧಾನ ಬಳಸಲಿದೆ ಎಂಬ ನಿರೀಕ್ಷೆಯಿದೆ. ಮತ್ತೊಂದೆಡೆ, ತಂಡವು ಒಂದು ತಿಂಗಳಲ್ಲಿ ಇಂಟರ್‌ಕಾಂಟಿನೆಂಟಲ್ ಮತ್ತು ಸ್ಯಾಫ್ ಪ್ರಶಸ್ತಿಗಳನ್ನು ಗೆದ್ದಿರುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ICC Ranking: ಐಸಿಸಿ ಟಿ20 ಶ್ರೇಯಾಂಕ; ಸೂರ್ಯಕುಮಾರ್ ಅಗ್ರಸ್ಥಾನ ಅಬಾಧಿತ