ಹ್ಯಾಂಗ್‌ಝೌ (ಚೀನಾ): ಇಲ್ಲಿನ ಹ್ಯಾಂಗ್‌ಝೌ ಕಿ-ಯುವಾನ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಏಷ್ಯನ್ ಗೇಮ್ಸ್ ಚೆಸ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಆಟಗಾರರು ತಮ್ಮ ಮೊದಲ ಸುತ್ತಿನ ಪಂದ್ಯಗಳನ್ನು ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಚೆಸ್ ಸ್ಪರ್ಧೆಗಳು ಕ್ಷಿಪ್ರ ಸ್ವರೂಪದಲ್ಲಿ ನಡೆಯುವುದರಿಂದ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ದಿನಕ್ಕೆ ಎರಡು ಸುತ್ತುಗಳನ್ನು ನಿಗದಿಪಡಿಸಲಾಗಿದೆ. ಭಾನುವಾರದಂದು ವಿದಿತ್ ಗುಜರಾತಿ, ಅರ್ಜುನ್ ಎರಿಗೈಸಿ, ಕೊನೇರು ಹಂಪಿ ಮತ್ತು ದ್ರೋಣವಲ್ಲಿ ಹರಿಕಾ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ, ಭಾರತದ ವಿದಿತ್ ಗುಜರಾತಿ ಅವರು ಕಪ್ಪು ಕಾಯಿಗಳೊಂದಿಗೆ ಬಾಂಗ್ಲಾದೇಶದ ಫಹಾದ್ ಮೊಹಮ್ಮದ್ ರಹ್ವ್ಮನ್ ಅವರನ್ನು ಸೋಲಿಸಿದರು ಮತ್ತು ಸ್ವಿಸ್ ಲೀಗ್ ಮಾದರಿಯಲ್ಲಿ ನಡೆಯುತ್ತಿರುವ ಒಂಬತ್ತು ಸುತ್ತಿನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಅರ್ಜುನ್ ಎರಿಗೈಸಿ ಫಿಲಿಪೈನ್ಸ್‌ನ ಪಾಲೊ ಬೆರ್ಸಾಮಿನಾ ವಿರುದ್ಧ ಜಯ ಗಳಿಸಿದರು. 2010ರಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ನಂತರ ಚದುರಂಗವನ್ನು ಏಷ್ಯನ್ ಗೇಮ್ಸ್ಗೆ ಸೇರಿಸಲಾಯಿತು.
ಮಹಿಳೆಯರ ವಿಭಾಗದಲ್ಲಿ ಕೋನೇರು ಹಂಪಿ ಮತ್ತು ದ್ರೋಣವಳ್ಳಿ ಹರಿಕಾ ತಮ್ಮ ತಮ್ಮ ಪಂದ್ಯಗಳಲ್ಲಿ ಜಯ ಸಾಧಿಸಿದರು. ಚೀನಾದ ಮಾಜಿ ವಿಶ್ವ ಚಾಂಪಿಯನ್ ಹೌ ಯಿಫಾನ್ ನೇತೃತ್ವದ ಫೀಲ್ಡ್‌ನಲ್ಲಿ ಮೂರನೇ ಶ್ರೇಯಾಂಕ ಪಡೆದ ಹಂಪಿ, ಇರಾನ್ ಮಹಿಳೆ ಗ್ರ್ಯಾಂಡ್‌ಮಾಸ್ಟರ್ ಮೊಹಿನಾ ಅಲಿನಾಸಾಬಲಂದಾರಿ ಅವರನ್ನು ಬಿಳಿ ಕಾಯಿಗಳೊಂದಿಗೆ ಸೋಲಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ರ್ಲೌಡಾ ಅಲಾಲಿ ಅವರನ್ನು ಸೋಲಿಸಿದ ಹರಿಕಾ ಕೂಡ ಗೆಲುವಿನೊಂದಿಗೆ ಪ್ರಾರಂಭಿಸಿದರು. 2502 ಇಎಲ್ಒ ರೇಟಿಂಗ್‌ನೊಂದಿಗೆ ವಿಶ್ವದ 13ನೇ ಸ್ಥಾನದಲ್ಲಿರುವ ಹರಿಕಾಗೆ ಹೋಲಿಸಿದರೆ ರ್ಲೌಡಾ ಅಲಾಲಿ 1915 ರ ರೇಟಿಂಗ್ನಿಂದ ಟಾಪ್ 10ರೊಳಗಿದ್ದಾರೆ.
ಶ್ರೀಹರಿ ನಟರಾಜ್ ಕೈತಪ್ಪಿದ ಪದಕ: ಭಾರತದ ಈಜುಪಟು ಶ್ರೀಹರಿ ನಟರಾಜ್ 19ನೇ ಏಷ್ಯನ್ ಗೇಮ್ಸ್‌ನ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್ ನಲ್ಲಿ ಆರನೇ ಸ್ಥಾನ ಪಡೆದರು. ಎರಡನೇ ಸ್ಥಾನದೊಂದಿಗೆ ಓಟವನ್ನು ಪ್ರಾರಂಭಿಸಿದ ನಟರಾಜ್ 54.48 ಸಮಯವನ್ನು ದಾಖಲಿಸಿದರು. ಚೀನಾದ ಕ್ಸು ಜಿಯಾಯು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಜಪಾನ್‌ನ ಐರಿ ರ್ಯೊಸುಕೆ ಬೆಳ್ಳಿ ಮತ್ತು ಕೊರಿಯಾದ ಲೀ ಜುಹೊ ಕಂಚಿನ ಪದಕ ಪಡೆದರು.
ರಿಲೆಯಲ್ಲಿ ಫೈನಲ್ ತಲುಪಿದ ವನಿತೆಯರು: ಮಹಿಳೆಯರ 4x100 ಮೀ. ಫ್ರೀಸ್ಟೈಲ್ ರಿಲೇ ಹೀಟ್ 2 ರಲ್ಲಿ 3:53.80 ರ ನಂತರ ಫೈನಲ್‌ಗೆ ತಲುಪಿತು. 3:53.80 ರ ಅದ್ಭುತ ಸಮಯದೊಂದಿಗೆ, ಶಿವಂಗಿ ಶರ್ಮಾ, ದಿನಿಧಿ ದೇಸಿಂಗು, ಮಾನ ಪಟೇಲ್ ಮತ್ತು ಜಾನ್ವಿ ಚೌಧರಿ ತಂಡವು ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು.
ಇದನ್ನೂ ಓದಿ: Asian Games: ನಾಳೆ ಭಾರತಕ್ಕೆ ಚಿನ್ನದ ಕನಸು.. ವನಿತೆಯರ ಕ್ರಿಕೆಟ್ ತಂಡ ಲಂಕಾ ಮಣಿಸಿ ಗೆಲ್ಲುತ್ತಾ ಸ್ವರ್ಣ ಪದಕ?