ಕೀಲ್ಸ್ (ಪೋಲೆಂಡ್) : 2019ರ ಏಷ್ಯನ್ ಯೂತ್ ಚಾಂಪಿಯನ್ ವಿಂಕಾ ಮತ್ತು ಆಲ್ಫಿಯಾ ಪಠಾಣ್ ಸೇರಿ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಪೋಲೆಂಡ್‌ನ ಕೀಲ್ಸ್ನಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದು, ಪದಕ ಖಚಿತಪಡಿಸಿದ್ದಾರೆ.
6ನೇ ದಿನವಾದ ಇಂದು ವಿಂಕಾ, ಆಲ್ಫಿಯಾ ಜೊತೆಗೆ ಗೀತಿಕಾ ಹಾಗೂ ಪೂನಮ್ ಕೂಡ ಸೆಮಿಫೈನಲ್ ಪ್ರವೇಶಿಸಿ ಕನಿಷ್ಟ ಕಂಚು ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಎಲ್ಲಾ ನಾಲ್ಕು ಬಾಕ್ಸರ್‌ಗಳು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದರು.
ಪಾಣಿಪತ್ ಬಾಕ್ಸರ್ ವಿಂಕಾ 60 ಕೆಜಿ ವಿಭಾಗದಲ್ಲಿ ಕೊಲಂಬಿಯಾದ ಕ್ಯಾಮಿಲೊ ಕ್ಯಾಮೆಲಾ ಇರುದ್ಧ 5-0ಯಿಂದ ಗೆದ್ದರೆ, 81+ಕೆಜಿ ವಿಭಾಗದಲ್ಲಿ 2019ರ ಏಷ್ಯನ್ ಜೂನಿಯರ್ ಚಾಂಪಿಯನ್ ನಾಗ್ಪುರದ ಅಲ್ಫಿಯಾ ಕೂಡ 5-0 ಅಂತರದಲ್ಲೇ ಹಂಗೇರಿಯಾದ ರೆಕಾ ಹೊಫ್‌ಮನ್ ವಿರುದ್ಧ ಜಯ ಸಾಧಿಸಿದರು.
57ಕೆಜಿ ವಿಭಾಗದಲ್ಲಿ ಪೂನಮ್ 5-0ಯಿಂದ ಕಜಕಸ್ತಾನದ ನಜೆರ್ಕ್ ಸೆರಿಕ್ ವಿರುದ್ಧ ಹಾಗೂ 48 ಕೆಜಿ ವಿಭಾಗದಲ್ಲಿ ಗೀತಿಕಾ ರುಮೇನಿಯಾದ ಎಲಿಜಬೆತ್ ಒಸ್ತನ್ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು. ಆದರೆ, 81 ಕೆಜಿ ವಿಭಾಗದಲ್ಲಿ ಖುಷಿ ತಮ್ಮ ಕ್ವಾರ್ಟರ್ಫೈನಲ್ನಲ್ಲಿ ಟರ್ಕಿಯ ಬುಸ್ರಾ ಇಸಿಲ್ದಾರ್ ಎದುರು ಸೋಲು ಕಂಡು ನಿರಾಶೆ ಅನುಭವಿಸಿದರು.
ಪುರುಷರ 75 ಕೆಜಿ ವಿಭಾಗದಲ್ಲಿ ಮನೀಷ್ ಜೋರ್ಡಾನ್ನ ಅಬ್ದುಲ್ಲಾ ಅಲಾರಾಗ್ರನ್ನು 5-0 ಅಂತರದಲ್ಲಿ, 69 ಕೆಜಿ ವಿಭಾಗದಲ್ಲಿ ಸುಮಿತ್ 5-0ಯಲ್ಲಿ ಸ್ಲೋವಾಕಿಯಾದ ಲ್ಯಾಡಿಸ್ಲೇವ್ ಹೊರ್ವತ್ರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ.
ಇದನ್ನು ಓದಿ : ಏಷ್ಯನ್ ಕುಸ್ತಿ ಅಖಾಡದಲ್ಲಿ ಬೆಳ್ಳಿ ಗೆದ್ದ ದೀಪಕ್ ಪೂನಿಯಾ