ಚೆನ್ನೈ: ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಫೆನ್ಸಿಂಗ್ ವಿಭಾಗಕ್ಕೆ (ಕತ್ತಿವರಸೆ) ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಮಿಳುನಾಡಿನ ಸಿ.ಎ. ಭವಾನಿ ದೇವಿ, ಟೋಕಿಯೊ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ.
ನಾನು ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ನನ್ನ ಸಾಧನೆಗೆ ಯಾವುದೇ ಮಿತಿ ಹಾಕುವುದಿಲ್ಲ. ನಾನು ಈಗಿನಿಂದ ಒಲಿಂಪಿಕ್ಸ್ವರೆಗಿನ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಬಯಸುತ್ತೇನೆ. ಜೊತೆಗೆ ಅತ್ಯುತ್ತಮವಾದುದನ್ನು ನೀಡಲು ಬಯಸುತ್ತೇನೆ. ಇಡೀ ಪ್ರಪಂಚದ ಮುಂದೆ ನನ್ನ ದೇಶವನ್ನು ಹೆಮ್ಮೆ ಪಡಿಸಲು ಬಯಸುತ್ತೇನೆ ಎಂದು ಭವಾನಿ ದೇವಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎಲ್ಲಾ ಸ್ಪರ್ಧೆಗಳಿಗೆ ಹೋಗುವುದು ಮುಖ್ಯವೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿಲ್ಲ, ಆದರೂ ನಾನು ಯಾವುದನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ. ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಮತ್ತು ಎಲ್ಲಾ ಸ್ಪರ್ಧೆಗಳಿಗೆ ಹೋಗಿದ್ದೇನೆ. ನನ್ನ ಶ್ರೇಯಾಂಕಗಳನ್ನು ಸುಧಾರಿಸಲು ನಾನು ಗಾಯಗೊಂಡಿದ್ದರೂ ಸಹ ಆಡಿದ್ದೇನೆ. ನನ್ನ ಕುಟುಂಬಸ್ಥರು ಹಾಗೂ ತರಬೇತುದಾರರು ನನಗೆ ತುಂಬಾ ಸಹಾಯ ಮಾಡಿದ್ದಾರೆ ಎಂದರು.
ಫೆನ್ಸಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಅಧ್ಯಕ್ಷ ರಾಜೀವ್ ಮೆಹ್ತಾ ಮಾತನಾಡಿ, ಕ್ರೀಡಾ ಸಚಿವ ಕಿರೆನ್ ರಿಜಿಜು ಫೆಡರೇಶನ್‌ಗೆ ಎಲ್ಲ ಸಹಕಾರ ನೀಡಿದ್ದಾರೆ. ಭವಾನಿ ಅವರು ನಿಜವಾಗಿಯೂ ಶ್ರಮವಹಿಸಿದ್ದರಿಂದ ಎಲ್ಲಾ ಕ್ರೆಡಿಟ್ ಅವರಿಗೆ ಸಿಗುತ್ತದೆ. ಫೆನ್ಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಬೆಂಬಲ ನೀಡುತ್ತಿದೆ. ಕ್ರೀಡಾ ಸಚಿವ ರಿಜಿಜು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಫೆನ್ಸಿಂಗ್ಗಾಗಿ ಅಸಾಧಾರಣ ಕೆಲಸ ಮಾಡಿದ್ದಾರೆ ಎಂದು ಹೇಳಿದರು.