ಭುವನೇಶ್ವರ(ಒಡಿಶಾ): ಕ್ವಾರ್ಟರ್ಫೈನಲ್ ತಲುಪಲು ಗೆಲ್ಲಲೇಬೇಕಿದ್ದ ಮಹತ್ವದ ಪಂದ್ಯದಲ್ಲಿ ಭಾರತ, ವೇಲ್ಸ್ ವಿರುದ್ಧ 4-2 ರಲ್ಲಿ ಜಯ ಸಾಧಿಸಿದೆ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಟೀಂ ಇಂಡಿಯಾ ಕ್ರಾಸ್ ಓವರ್ ಮೂಲಕ ಕ್ವಾರ್ಟರ್ಗೆ ಲಗ್ಗೆ ಇಡಬೇಕಿದೆ. ಕಳೆದ ಪಂದ್ಯದಲ್ಲಿ ಅಂಕ ರಹಿತ ಡ್ರಾ ಸಾಧಿಸಿದ್ದ ಭಾರತ ಈ ಪಂದ್ಯದಲ್ಲಿ ದೊಡ್ಡ ಗೆಲುವಿನ ಅಗತ್ಯವಿತ್ತು. ಆದರೆ, 4-2 ರಲ್ಲಿ ವೇಲ್ಸ್ ಮಣಿಸಿತಾದರೂ ಕ್ವಾರ್ಟರ್ ಫೈನಲ್ಗೆ ಟಿಕೆಟ್ ಖಚಿತವಾಗಲಿಲ್ಲ.
ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಕ್ವಾರ್ಟರ್ನಲ್ಲಿ ಯಾವುದೇ ಗೋಲು ದಾಖಲಿಸಲಿಲ್ಲ. 22 ನೇ ನಿಮಿಷದಲ್ಲಿ ಸಂಶೇರ್ ಸಿಂಗ್ ರಿಬೌಂಡ್ ಮೂಲಕ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದು ಕೊಟ್ಟರು. 32 ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಭಾರತದ ಅಕ್ಷದೀಪ್ ಸಿಂಗ್ ಅದ್ಭುತ ಗೋಲು ಗಳಿಸಿದರು. ಈ ಮೂಲಕ ಭಾರತ 2-0 ಮುನ್ನೆ ಪಡೆಯಿತು.
ದೊಡ್ಡ ಗೆಲುವಿನ ಅಂತರದ ನಿರೀಕ್ಷೆತಲ್ಲಿದ್ದ ಭಾರತಕ್ಕೆ ವೇಲ್ಸ್ 43 ನೇ ನಿಮಿಷದಲ್ಲಿ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಮಾಡಿದ ವೇಲ್ಸ್ 2-1 ಹಿನ್ನಡೆ ತಗ್ಗಿಸಿತು. 44 ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿಯನ್ನು ಗೋಲು ಬಾರಿಸಿ 2-2 ರಲ್ಲಿ ಸಮಬಲ ಸಾಧಿಸಿತು. ನಾಲ್ಕನೇ ಅವಧಿಯಲ್ಲಿ ಸಿಡಿದ ಭಾರತದ ಅಕ್ಷದೀಪ್ ಮತ್ತೊಂದು ಗೋಲು ಬಾರಿ 3-2 ಮುನ್ನಡೆ ಸಿಗುವಂತೆ ಮಾಡಿದರು. ಬಳಿಕ ಕೊನೆಯಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್ಪ್ರೀತ್ ಗೋಲಾಗಿಸಿ 4-2 ರಲ್ಲಿ ಪಂದ್ಯ ಗೆಲ್ಲಿಸಿದರು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್ನ ಡಿ ಗುಂಪಿನಲ್ಲಿ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕ್ವಾರ್ಟರ್ ಫೈನಲ್ ಟಿಕೆಟ್ಗಾಗಿ ಮೆನ್ ಇನ್ ಬ್ಲೂ ಪಡೆ ನ್ಯೂಜಿಲ್ಯಾಂಡ್ ಎದುರು ಕ್ರಾಸ್ ಓವರ್ ಪಂದ್ಯವನ್ನು ಆಡಬೇಕಿದೆ. ಪಂದ್ಯ ಜನವರಿ 22 ರಂದು ನಡೆಯಲಿದೆ.
ಮಲೇಷ್ಯಾಗೆ ಜಯ: ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ, ಪ್ರಬಲ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಮಲೇಷ್ಯಾ 3-2 ಗೋಲುಗಳಿಂದ ಗೆಲುವು ಸಾಧಿಸಿತು. ವಿಶ್ವಕಪ್‌ನಲ್ಲಿ ಮಲೇಷ್ಯಾ ಎರಡನೇ ಗೆಲುವಿನೊಂದಿಗೆ ಸಿ ಗುಂಪಿನಲ್ಲಿ 6 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.
ಮಲೇಷ್ಯಾ ಪರವಾಗಿ ಫೈಝಲ್ ಸಾರಿ 2 ಗೋಲು ಬಾರಿಸಿದರೆ, ಹಿಯಾಮ್ ಭೂಲ್ 1 ಗೋಲು ಬಾರಿಸಿದರು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿತ್ತು. ಮೊದಲಾರ್ಧದಲ್ಲಿ ಮಲೇಷ್ಯಾ ಒಂದು ಗೋಲಿನೊಂದಿಗೆ ಖಾತೆ ಆರಂಭಿಸಿದರೆ, ನ್ಯೂಜಿಲ್ಯಾಂಡ್ ಯಾವುದೇ ಗೋಲು ದಾಖಲಾಗಲಿಲ್ಲ.
ಪಂದ್ಯ ದ್ವಿತೀಯಾರ್ಧದಲ್ಲಿ ರೋಚಕತೆ ಕಂಡುಬಂದು, ಗೋಲು ಗಳಿಸಲು ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ 43ನೇ ನಿಮಿಷದಲ್ಲಿ ಮಲೇಷ್ಯಾದ ರಹೀಮ್ ರಾಜಿ ಗೋಲು ದಾಖಲಿಸಿದರು. ಮತ್ತೊಂದೆಡೆ, ನ್ಯೂಜಿಲ್ಯಾಂಡ್ ಹೇಡನ್ ಫಿಲಿಪ್ಸ್ ಪಂದ್ಯದ 52 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆ ಬಳಿಕ ನ್ಯೂಜಿಲ್ಯಾಂಡ್ನ ಸ್ಯಾಮ್ ಲೇನ್ 53ನೇ ನಿಮಿಷದಲ್ಲಿ ಗೋಲು ಬಾರಿಸಿ 2-2ರಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು.
ಮಲೇಷ್ಯಾದಲ್ಲಿ ಫೈಝೆಲ್ ಸಾರಿ ಮತ್ತೊಂದು ಗೋಲು ಹೊಡೆದು ಪಂದ್ಯವನ್ನು 3-2 ರಲ್ಲಿ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ ಮಲೇಷ್ಯಾ 3-2 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.
ನೆದರ್ಲೆಂಡ್ಸ್‌ಗೆ ಏಕಪಕ್ಷೀಯ ಜಯ: ಮತ್ತೊಂದು ಪಂದ್ಯದಲ್ಲಿ ಚಿಲಿಯನ್ನು 14-0 ಗೋಲುಗಳಿಂದ ನೆದರ್ಲೆಂಡ್ಸ್ ತಂಡ ಸೋಲಿಸಿತು. ಈ ಗೆಲುವಿನೊಂದಿಗೆ ನೆದರ್ಲೆಂಡ್ಸ್ ಪೂಲ್ ಸಿ ಪಟ್ಟಿಯಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನೆದರ್ಲೆಂಡ್ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು ಅಜೇಯವಾಗಿ ಉಳಿದಿದೆ. ಪಂದ್ಯದಲ್ಲಿ ಜೀಪ್ ಜಾನ್ಸೆನ್ 4 ಗೋಲು ಗಳಿಸಿ ಪಂದ್ಯಶ್ರೇಷ್ಠರಾದರು.
ಪಂದ್ಯದ ಆರಂಭದಿಂದಲೂ ನೆದರ್ಲೆಂಡ್ಸ್ ಎದುರಾಳಿ ತಂಡದ ಮೇಲೆ ಪ್ರಭುತ್ವ ಸಾಧಿಸಿತು. ಇದು 2023 ರ ಹಾಕಿ ವಿಶ್ವಕಪ್‌ನಲ್ಲಿ ಯಾವುದೇ ತಂಡದಿಂದ ದಾಖಲಾದ ಅತ್ಯಧಿಕ ಗೋಲುಗಳಾಗಿವೆ. ಜೀಪ್ ಜಾನ್ಸೆನ್ ತಂಡಕ್ಕಾಗಿ ಗರಿಷ್ಠ 4 ಗೋಲುಗಳನ್ನು ಗಳಿಸಿದರೆ, ಥಿಯೆರಿ ಬ್ರಿಂಕ್‌ಮನ್ ಮೂರು, ಕೊಯೆನ್ ಬಿಜೆನ್ 2, ಡೆರೆಕ್ ಡಿ ವೈಲ್ಡರ್, ಟೆರೆನ್ಸ್ ಪೀಟರ್ಸ್, ಜಸ್ಟಿನ್ ಬ್ಲಾಕ್, ಥೀಸಸ್ ವ್ಯಾನ್ ಡ್ಯಾಮ್ ಮತ್ತು ಟೆವಿನ್ ಬೈನ್ಸ್ ತಲಾ ಒಂದು ಗೋಲು ಗಳಿಸಿದರು.
ಓದಿ: ಹಾರ್ದಿಕ್ ಪಾಂಡ್ಯ ವಿವಾದಾತ್ಮಕ ಔಟ್.. ಮಾಜಿ ಕ್ರಿಕೆಟಿಗರ ಮಧ್ಯೆ 'ಭಿನ್ನ'ಮತ