ಭುವನೇಶ್ವರ (ಒಡಿಶಾ): ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯುವ ಹಾಕಿ ಪುರುಷರ ವಿಶ್ವಕಪ್ 2023ಕ್ಕೆ ಕೇವಲ 50 ದಿನಗಳು ಮಾತ್ರ ಬಾಕಿ ಉಳಿದಿದೆ. ದೇಶದ ವಿವಿಧ ಭಾಗಗಳಲ್ಲಿ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿಯನ್ನು ತೆಗೆದುಕೊಂಡು ಹೋಗುವ ಕುರಿತು ಹಾಕಿ ಇಂಡಿಯಾ ಪ್ರಕಟಿಸಿದೆ.
ಡಿಸೆಂಬರ್ 5ರಂದು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭುವನೇಶ್ವರದಲ್ಲಿ ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕೆ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸುವ ಮೂಲಕ ಈ ಪ್ರವಾಸವು ಅಧಿಕೃತವಾಗಿ ಪ್ರಾರಂಭವಾಗಲಿದೆ. ಪ್ರತಿಷ್ಠಿತ ಟ್ರೋಫಿಯು ಭುವನೇಶ್ವರಕ್ಕೆ ಹಿಂದಿರುಗುವ ಮುನ್ನ 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಾದ್ಯಂತ ಸಂಚರಿಸಲಿದೆ.
21 ದಿನಗಳ ಕಾಲ ಹಾಕಿ ಟ್ರೋಫಿ ಯಾತ್ರೆ: ಡಿಸೆಂಬರ್ 5ರಿಂದ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿ ಪ್ರವಾಸ ಆರಂಭವಾಗಿದ್ದು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಒಟ್ಟಾರೆ 21 ದಿನಗಳ ಕಾಲ ಸಂಚರಿಸಲಿದೆ. ಡಿಸೆಂಬರ್ 24ರಂದು ರಾಜಧಾನಿ ಬೆಂಗಳೂರಿಗೆ ಹಾಕಿ ಟ್ರೋಫಿ ಆಗಮಿಸುವ ನಿರೀಕ್ಷೆ ಇದೆ.
ಕರ್ನಾಟಕದ ಜೊತೆಗೆ ಪಶ್ಚಿಮ ಬಂಗಾಳ, ಮಣಿಪುರ, ಅಸ್ಸೋಂ, ಜಾರ್ಖಂಡ್, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ನವದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳದ ಜನತೆ ಟ್ರೋಫಿಯನ್ನು ನೋಡುವ ಅವಕಾಶ ಪಡೆಯಲಿದ್ದಾರೆ. ಅಂತಿಮವಾಗಿ ಡಿಸೆಂಬರ್ 25ರಂದು ಒಡಿಶಾಗೆ ಟ್ರೋಫಿ ಯಾತ್ರೆ ಹಿಂತಿರುಗಲಿದ್ದು, ಇದರ ಬಳಿಕ ಒಡಿಶಾ ರಾಜ್ಯಾದ್ಯಂತ ಸಂಚರಿಸಲಿದೆ.
ಇದನ್ನೂ ಓದಿ: ಪುರುಷರ ಹಾಕಿ ವಿಶ್ವಕಪ್: ಪೂಲ್ ಡಿಯಲ್ಲಿ ಆತಿಥೇಯ ಭಾರತ
ಟ್ರೋಫಿ ಯಾತ್ರೆ ಕುರಿತು ಮಾತನಾಡಿದ ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ, ದೇಶದಾದ್ಯಂತ ಹಾಕಿ ಅಭಿಮಾನಿಗಳಿಗೆ ಪ್ರತಿಷ್ಠಿತ ಟ್ರೋಫಿಯನ್ನು ವೀಕ್ಷಿಸಲು ಅವಕಾಶವನ್ನು ನೀಡುವುದು ಈ ಯಾತ್ರೆ ಹಿಂದಿನ ಆಲೋಚನೆಯಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಅಭಿಮಾನಿಗಳು ಯಾವಾಗಲೂ ಹಾಕಿ ಮತ್ತು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತವರು ತಂಡವನ್ನು ಹುರಿದುಂಬಿಸಲು ಉತ್ಸುಕರಾಗಿರುತ್ತಾರೆ. ಈ ಪ್ರವಾಸವು ಅಭಿಮಾನಿಗಳಿಗೆ ಟೂರ್ನಿ ಬಗ್ಗೆ ಮತ್ತಷ್ಟು ಅಭಿಯಾನ ಹೆಚ್ಚಿಸುತ್ತದೆ. ಮೇಲಾಗಿ ಟೂರ್ನಿ ಆರಂಭಕ್ಕೂ ಮುನ್ನ ಮೊದಲು ಭಾರತೀಯ ತಂಡಕ್ಕೆ ಅಭಿಮಾನಿಗಳು ತಮ್ಮ ಶುಭಾಶಯಗಳನ್ನು ತಿಳಿಸುವ ಅವಕಾಶ ಒದಗಲಿದೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಭಾಗಿ: ಎಫ್ಐಹೆಚ್ ಒಡಿಶಾ ಹಾಕಿ ಪುರುಷರ ವಿಶ್ವಕಪ್ 2023ರ ಟೂರ್ನಿಯು ಭುವನೇಶ್ವರ ಮತ್ತು ರೂರ್ಕೆಲಾ ಜನವರಿ 13ರಿಂದ ಪ್ರಾರಂಭವಾಗಲಿದೆ. ಸ್ಪೇನ್, ಇಂಗ್ಲೆಂಡ್ ಮತ್ತು ವೇಲ್ಸ್ ಜೊತೆಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಆತಿಥೇಯ ಭಾರತ, ಜನವರಿ 13ರಂದು ಸ್ಪೇನ್ ವಿರುದ್ಧದ ಪಂದ್ಯದ ಮೂಲಕ ತಮ್ಮ ಅಭಿಯಾನ ಪ್ರಾರಂಭಿಸಲಿದೆ.
ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಭಾರತ, ಅರ್ಜೆಂಟೀನಾ, ಜರ್ಮನಿ, ನ್ಯೂಜಿಲೆಂಡ್, ಇಂಗ್ಲೆಂಡ್, ಫ್ರಾನ್ಸ್, ಕೊರಿಯಾ, ಮಲೇಷ್ಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ಜಪಾನ್, ಚಿಲಿ ಮತ್ತು ವೇಲ್ಸ್ ಸೇರಿ 16 ತಂಡಗಳು ಭಾಗವಹಿಸಲಿವೆ.
ಇದನ್ನೂ ಓದಿ: ಪುರುಷರ ಹಾಕಿ ವೇಳಾಪಟ್ಟಿ ಬಿಡುಗಡೆ: ಸ್ಪೇನ್ ವಿರುದ್ಧ ಭಾರತದ ಮೊದಲ ಪಂದ್ಯ