ಚಂಡೀಗಢ (ಹರಿಯಾಣ): ಹರಿಯಾಣದ ಕ್ರೀಡಾಪಟುಗಳು ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದವರಿಗೆ ಹರಿಯಾಣ ಸರ್ಕಾರ 5 ಲಕ್ಷ ರೂ. ಸಿದ್ಧತೆ ಹಣ ನೀಡಲು ನಿರ್ಧರಿಸಿದೆ.
ಚಂಡೀಗಢದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡೆಸಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹರಿಯಾಣದ ಅತ್ಯುತ್ತಮ ಕ್ರೀಡಾಪಟುಗಳು (ನೇಮಕಾತಿ ಮತ್ತು ಸೇವೆಯ ಷರತ್ತು) ನಿಯಮಗಳು 2018 ಅನ್ನು ಹರಿಯಾಣ ಅತ್ಯುತ್ತಮ ಕ್ರೀಡಾಪಟುಗಳು (ಗ್ರೂಪ್ ಎ, ಬಿ & ಸಿ) ಸೇವಾ ನಿಯಮಗಳು-2021 ರೊಂದಿಗೆ ಬದಲಾಯಿಸುವ ಪ್ರಸ್ತಾಪವನ್ನೂ ಸಂಪುಟ ಮಂಡಿಸಿತು. ಹೊಸ ನಿಯಮಗಳ ಪರಿಚಯದೊಂದಿಗೆ ರಾಜ್ಯದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಪ್ರತ್ಯೇಕ ಕೇಡರ್ ರಚಿಸಲಾಗುತ್ತದೆ.
ಇದಕ್ಕಾಗಿ ಗ್ರೂಪ್-ಎ (ಉಪ ನಿರ್ದೇಶಕ) 50 ಹುದ್ದೆಗಳು, ಗ್ರೂಪ್-ಬಿ (ಹಿರಿಯ ಕೋಚ್) 100 ಹುದ್ದೆಗಳು, ಗ್ರೂಪ್-ಬಿ (ಕೋಚ್) 150 ಹುದ್ದೆಗಳು ಮತ್ತು ಗ್ರೂಪ್-ಸಿ (ಜೂನಿಯರ್ ಕೋಚ್) 250 ಹುದ್ದೆಗಳಿಗೆ ಮಂಜೂರಾಗಿವೆ.
ವಯಸ್ಸಿನ ಮಿತಿಯನ್ನು 50 ವರ್ಷದಿಂದ 42 ವರ್ಷಕ್ಕೆ ಇಳಿಸಲಾಗಿದೆ. ಇದರ ಹೊರತಾಗಿ ದಕ್ಷಿಣ ಏಷ್ಯಾದ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾಕೂಟ, ರಂಣಜಿ ಟ್ರೋಫಿ ಮುಂತಾದ ಹೊಸ ನಿಯಮಗಳಲ್ಲಿ ಕೆಲವು ಹೊಸ ಪಂದ್ಯಾವಳಿಗಳನ್ನು ಸೇರಿಸಲಾಗಿದೆ. ಆರಂಭಿಕ ನೇಮಕಾತಿಯ ಸಮಯದಲ್ಲಿ ಹುದ್ದೆಗೆ ಅಗತ್ಯವಾದ ಅರ್ಹತೆಗಳನ್ನು ಹೊಂದಿಲ್ಲದಿದ್ದರೆ ಬಾಕಿ ಇರುವ ಕ್ರೀಡಾಪಟುಗಳಿಗೆ ತಾತ್ಕಾಲಿಕ ನೇಮಕಾತಿ ನೀಡಲಾಗುತ್ತದೆ.