ಚೆನ್ನೈ (ತಮಿಳುನಾಡು): 21 ವರ್ಷದ ನಂತರ ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದಾರೆ. ನಿನ್ನೆ (ಮಂಗಳವಾರ) ನಡೆದ ಮೊದಲ ಪಂದ್ಯ 35 ನಡೆಗಳ ನಂತರ ಡ್ರಾ ಆಗಿತ್ತು. ಈ ಕುರಿತು ಭಾರತ ಮಾಜಿ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಪ್ರತಿಕ್ರಿಯಿಸಿ, ಭಾರತ ದೇಶವು ಚೆಸ್‌ನಲ್ಲಿ ಸುವರ್ಣ ತಲೆಮಾರು ಕಾಣುತ್ತಿದೆ. ವಿಶ್ವ ವೇದಿಕೆಯಲ್ಲಿ ಹೆಸರು ಮಾಡುವುದರ ಜೊತೆಗೆ ಸಾಕಷ್ಟು ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹುಟ್ಟುಹಾಕುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಜೆರ್ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ನಲ್ಲಿ 18 ವರ್ಷದ ಪ್ರಜ್ಞಾನಂದ, ವಿಶ್ವದ ನಂಬರ್ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸುತ್ತಿದ್ದಾರೆ. ಪ್ರಜ್ಞಾನಂದ ಅವರು ಅಮೆರಿಕದ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಮವಾರ ನಡೆದ ಸೆಮಿಫೈನಲ್ನ ಟೈ ಬ್ರೇಕರ್ನಲ್ಲಿ ಮಣಿಸಿ, ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಶ್ವನಾಥನ್ ಆನಂದ್, "ಭಾರತದಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಆಟಗಾರರು 2,700ಕ್ಕೂ ಹೆಚ್ಚು ಎಲೋ ರೇಟಿಂಗ್ (Elo Rating) ಹೊಂದಿದ್ದಾರೆ. ನಾನು ಇದನ್ನು ಮುಂಚಿತವಾಗಿ ಹೇಳುತ್ತಿರಬಹುದು. ಆದರೆ ಭಾರತ ಚೆಸ್‌ನಲ್ಲಿ ಸುವರ್ಣ ಪೀಳಿಗೆಯನ್ನು ಹುಟ್ಟುಹಾಕುತ್ತಿದೆ. 20 ವಯಸ್ಸಿಗಿಂತ ಕೆಳಗಿನವರು ಈ ಸಾಲಿನಲ್ಲಿರುವುದು ಪ್ರಮುಖ ಅಂಶ. ಮುಂದಿನ 10 ವರ್ಷ ಉನ್ನತ ಮಟ್ಟದ ಚೆಸ್ ಕಾಣಸಿಗಲಿದೆ. ಇದಕ್ಕಾಗಿ ನಾನು ಸುವರ್ಣ ತಲೆಮಾರು ಎಂದು ಕರೆಯುತ್ತಿದ್ದೇನೆ" ಎಂದರು.
ಇದೇ ವೇಳೆ ಆನಂದ್, ತಮ್ಮ ಕಾಲದ ಚೆಸ್ಗೂ ಈಗಿನ ಆಟಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ ಎಂದಿದ್ದಾರೆ. "ನಾನು ಬಹಳ ಸಮಯದಿಂದ ಈ ಪಂದ್ಯಾವಳಿಯಲ್ಲಿ ಏಕೈಕ ಭಾರತೀಯನಾಗಿದ್ದೆ. ಹಾಗಾಗಿ ಇದನ್ನು ನನ್ನ ಅನುಭವಕ್ಕೆ ಹೋಲಿಸಲಾಗದು. ನಾನು ನನ್ನ ಅನುಭವಗಳನ್ನು ವಿಶೇಷವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಂಚಿಕೊಳ್ಳುತ್ತೇನೆ. ಆದರೆ, ಚೆಸ್ ಈಗ ತುಂಬಾ ಬದಲಾಗಿದೆ".
"ಈಗ ಕಂಪ್ಯೂಟರ್ ಮೂಲಕ ಎಲ್ಲವೂ ಸರಳವಾಗಿದೆ. ನಮ್ಮ ಒಂದು ಚಲನೆಯ ನಂತರ ಕ್ಷಣದ ಬಿಡುವೂ ಸಿಗದೆ ಪ್ರತಿ ಚಲನೆ ಆಗಿರುತ್ತದೆ. ಹೀಗಾಗಿ ಆಲೋಚನೆಯ ರೀತಿ ಬದಲಾಗಿದೆ. ನನ್ನ ಅನುಭವವೂ ಇದರೊಂದಿಗೆ ಹೆಚ್ಚು ಹೋಲಿಕೆ ಆಗುವುದಿಲ್ಲ. ಯೋಚಿಸುವುದನ್ನು ಹೇಳಿಕೊಡಬಹುದು, ಆದರೆ ಈ ಸಮಯಕ್ಕೆ ಅದು ಅಷ್ಟು ಸೂಕ್ತವಾಗಿರುವುದಿಲ್ಲ" ಎಂದಿದ್ದಾರೆ.
ಇಂದಿನ ವಿಶ್ವಕಪ್ ಫೈನಲ್ ಪಂದ್ಯ: ಅಜೆರ್ಬೈಜಾನ್ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ನಲ್ಲಿ ಭಾರತ ಪ್ರಜ್ಞಾನಂದ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಇಂದು ಎರಡನೇ ಪಂದ್ಯದಲ್ಲಿ ಎದುರಿಸುತ್ತಿದ್ದಾರೆ. ಇಂದಿನ ಪಂದ್ಯವೂ ಡ್ರಾ ಆದಲ್ಲಿ ನಾಳೆ ಟೈ ಬ್ರೇಕರ್ ಸ್ಪರ್ಧೆ ನಡೆಯಲಿದೆ. (ಪಿಟಿಐ)
ಇದನ್ನೂ ಓದಿ: ಚೆಸ್ ವಿಶ್ವಕಪ್ ಫೈನಲ್: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್