ಹೈದರಾಬಾದ್: ಈ ವರ್ಷದ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಭಾರತದ ಪಾಲಿಗೆ ಅವಿಸ್ಮರಣೀಯ. 2023ರ ಏಷ್ಯನ್ ಗೇಮ್ಸ್ 19ನೇ ಆವೃತ್ತಿಗೆ ಭಾರತ ದೊಡ್ಡ ನಿರೀಕ್ಷೆಗಳೊಂದಿಗೆ ಪ್ರಯಾಣ ಬೆಳೆಸಿತ್ತು. ಅದರಂತೆ ನಿರೀಕ್ಷೆಗೂ ಮೀರಿ ಸಾಧನೆ ಮಾಡಿತ್ತು. ವಿದೇಶಿ ನೆಲದಲ್ಲಿ ಬರೋಬ್ಬರಿ 107 ಪದಕಗಳ ಬೇಟೆಯಾಡುವ ಮೂಲಕ ಹಳೆಯ ದಾಖಲೆಗಳೆಲ್ಲವನ್ನು ಭಾರತ ಅಳಿಸಿ ಹಾಕಿತ್ತು.
ನಮ್ಮ ಕ್ರೀಡಾಪಟುಗಳು ಅಸಾಧಾರಣ ಕೌಶಲ್ಯಗಳು ಮತ್ತು 4 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಈ ಕ್ರೀಡಾ ಕೂಟದಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚಿನ ಪದಕವನ್ನು ಬಾಚಿಕೊಂಡು ದಾಖಲೆ ನಿರ್ಮಿಸಿತು. 2018ರಲ್ಲಿ ನಡೆದ 18ನೇ ಆವೃತ್ತಿಯಲ್ಲಿ 70 ಪದಕಗಳನ್ನು ಪಡೆದಿರುವುದು ಅತ್ಯಧಿಕ ಸಾಧನೆಯಾಗಿತ್ತು. ಈ ಬಾರಿ ಶತಕ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿತು. ಅಲ್ಲದೇ ಪದಕಪಟ್ಟಿಯಲ್ಲಿ ಚೀನಾ, ಜಪಾನ್ ಮತ್ತು ಕೊರಿಯಾ ನಂತರ ನಾಲ್ಕನೇ ಸ್ಥಾನವನ್ನು ಅಲಂಕರಿಸಿಕೊಂಡಿತು.
ಆರ್ಚರಿಯಲ್ಲಿ ಸಾಧನೆ: ಅದರಲ್ಲಿ ಆರ್ಚರಿಯಲ್ಲಿ ಭಾರತದ ಕ್ರೀಡಪಟುಗಳು ಅಮೋಘ ಸಾಧನೆ ಮಾಡಿದ್ದಾರೆ. ಈ ಬಾರಿಯ ಆರ್ಚರಿ ಕ್ರೀಡೆಯಲ್ಲಿ ಭಾರತ 9 ಚಿನ್ನ, 5 ಬೆಳ್ಳಿ ಮತ್ತು 2 ಬೆಳ್ಳಿ ಪದಕ ಬಾಚಿಕೊಂಡಿದೆ.
ಕಾಂಪೌಂಡ್ ಆರ್ಚರಿಯಲ್ಲಿ ಭಾರತವು ಪ್ರಾಬಲ್ಯ ಸಾಧಿಸಿತ್ತು. ಈ ಕ್ರೀಡಾಕೂಟದಲ್ಲಿ ಭಾರತ ಎಲ್ಲ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಸ್ ಡಿಯೋಟಾಲೆ ಜೋಡಿಯು ಆರ್ಚರಿ ಮಿಶ್ರ ಪಂದ್ಯದಲ್ಲಿ ಮೊದಲ ಚಿನ್ನವನ್ನು ಗೆದ್ದುಕೊಂಡಿತು. ಜ್ಯೋತಿ ವೆನ್ನಮ್ ಅವರು ತಂಡ ಮತ್ತು ವೈಯಕ್ತಿಕ ಕಾಂಪೌಂಡ್ ಈವೆಂಟ್ ಸೇರಿದಂತೆ ಎರಡು ಚಿನ್ನದ ಪದಕಗಳನ್ನು ಸಹ ಬಾಚಿಕೊಂಡಿದ್ದರು. ಉಳಿದಂತೆ ಓಜಸ್ ಮತ್ತು ಅಭಿಷೇಕ್ ವರ್ಮಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ವಿಭಾಗದಲ್ಲಿ ಭಾರತ ಪರಾಕ್ರಮ ಪ್ರದರ್ಶಿಸಿತ್ತು.
ಬಾಕ್ಸಿಂಗ್ ಪಂದ್ಯ: ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ ಪಂದ್ಯದಲ್ಲಿ ಒಲಿಂಪಿಕ್ ಪದಕ ವಿಜೇತೆ ಲೊವಾಲಿನಾ ಬೆಳ್ಳಿ ಪದಕ ಸೇರಿದಂತೆ ಐದು ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಬಾಕ್ಸರ್‌ಗಳು ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಬಾಕ್ಸಿಂಗ್ ವಿವಿಧ ವಿಭಾಗಗಳಲ್ಲಿ ನಿಖತ್ ಜರೀನ್, ಪ್ರೀತಿ, ನರೇಂದರ್ ಮತ್ತು ಪರ್ವೀನ್ ಹೂಡಾ ಅವರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.
ಬ್ಯಾಡ್ಮಿಂಟನ್ನಲ್ಲಿ ಮೂರು ಪದಕ: ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಿನ್ನದ ಪದಕವನ್ನು ಗೆದ್ದಿದ್ದರೆ, ಎಚ್‌ಎಸ್ ಪ್ರಣೋಯ್ ಕಂಚಿನ ಪದಕವನ್ನು ಗೆದಿದ್ದರು. ಪುರುಷರ ಬ್ಯಾಡ್ಮಿಂಟನ್ಅಲ್ಲಿ ಬೆಳ್ಳಿಯನ್ನು ಭಾರತ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಹಾಕಿಯಲ್ಲಿ ಎರಡು ಪದಕ: ಭಾರತೀಯ ಪುರುಷರ ಹಾಕಿ ತಂಡವು ಏಷ್ಯಡ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಈ ಮೂಲಕ ಏಷ್ಯಡ್ನಲ್ಲಿ ನಾಲ್ಕನೇ ಬಾರಿಗೆ ಚಿನ್ನವನ್ನು ಗೆದ್ದಿತ್ತು. ಮತ್ತೊಂದೆಡ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಸೋಲಿಸಿದ ಮಹಿಳಾ ಹಾಕಿ ತಂಡ ಕಂಚಿನ ಪದಕ ಪಡೆದುಕೊಂಡಿತ್ತು.
ಕಬಡ್ಡಿಯಲ್ಲಿ ಎರಡು ಚಿನ್ನ: ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆಯನ್ನು 26-25 ಅಂಕಗಳಿಂದ ಸೋಲಿಸಿ ಚಿನ್ನವನ್ನು ಗೆದ್ದಿತ್ತು. ಪುರುಷರ ಕಬಡ್ಡಿ ತಂಡ ಕೂಡ ಕ್ರೀಡೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದು ಇರಾನ್ಗೆ ಮಣಿಸಿ ಚಿನ್ನ ಮುಡಿಗೇರಿಸಿಕೊಂಡಿತ್ತು.
ಶೂಟಿಂಗ್ನಲ್ಲಿ 22 ಪದಕ: ಶೂಟಿಂಗ್ ಕ್ರೀಡಾ ಕೂಟದಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ. ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 22 ಪದಕಗಳನ್ನು ಗೆಲ್ಲುವ ಮೂಲಕ, ಪದಕ ಪಟ್ಟಿಗೆ ಕೊಡುಗೆ ನೀಡಿತ್ತು.
ಈ ಬಾರಿಯ ಏಷ್ಯನ್ ಕ್ರೀಡಾಕೂಟವು ಕೇವಲ ಪದಕಗಳ ಲೆಕ್ಕವನ್ನು ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯನ್ನು ಸಾರಿ ಹೇಳುತ್ತಿದೆ. ಭಾರತದ ಅಥ್ಲೀಟ್‌ಗಳೂ ತಾವು ವಿಶ್ವದ ಅತ್ಯುತ್ತಮ ಆಟಗಾರರನ್ನು ಸೋಲಿಸಬಲ್ಲೆವು ಎಂಬುದನ್ನು ಮತ್ತೊಮ್ಮೆ ಈ ಮೂಲಕ ಸಾಬೀತು ಪಡಿಸಿದ್ದಾರೆ.
ಇದನ್ನೂ ಓದಿ: ಅನ್ಕ್ಯಾಪ್ಡ್ ಆಟಗಾರನಿಗೆ ಕೋಟಿ ಸುರಿದ ಚೆನ್ನೈ: ಯಾರೀತ ಬಲ್ಲಿರಾ?