ಅಹ್ಮದ್ ಬಿನ್ ಅಲಿ (ಕತಾರ್): ಫಿಫಾ ವಿಶ್ವಕಪ್‌ನ ಎರಡನೇ ದಿನ ಸಾಕಷ್ಟು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಯುಎಸ್ ಮತ್ತು ವೇಲ್ಸ್ ನಡುವಿನ ಜಿದ್ದಾಜಿದ್ದಿನ ಪಂದ್ಯ 1-1 ಗೋಲ್‌ನೊಂದಿಗೆ ಡ್ರಾನಲ್ಲಿ ಮುಕ್ತಾಯಗೊಂಡಿತು. ವೇಲ್ಸ್ 64 ವರ್ಷಗಳ ನಂತರ ವಿಶ್ವಕಪ್ ಅಂಗಣಕ್ಕಿಳಿದಿದ್ದು, ತಾನಾಡಿದ ಮೊದಲ ಪಂದ್ಯವನ್ನು ಡ್ರಾನಲ್ಲಿ ಮುಗಿಸಿದ್ದು ವಿಶೇಷವಾಗಿತ್ತು.
ಪಂದ್ಯದ 36ನೇ ನಿಮಿಷದಲ್ಲಿ ಯುಎಸ್ ಪರ ತಿಮೋತಿ ವೀಹ್ ಮೊದಲ ಗೋಲು ಗಳಿಸಿ ವೇಲ್ಸ್ ಮೇಲೆ ಒತ್ತಡ ಹೇರಿದರು. ಇದಕ್ಕೆ ತೀವ್ರ ಪ್ರತಿರೋಧ ತೋರಿದ ವೇಲ್ಸ್ ದ್ವಿತೀಯಾರ್ಧದಲ್ಲಿ ಲಯ ಕಂಡುಕೊಂಡಿತು. ತಂಡದ ಸ್ಟಾರ್ ಆಟಗಾರ ಗರೆಥ್ ಬೇಲ್ 82ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಬಾರಿಸುವ ಮೂಲಕ ಸೋಲಿನ ಭೀತಿಯಿಂದ ವೇಲ್ಸ್ ಅನ್ನು ಹೊರತಂದರು. ಈ ಮುಖೇನ ಪಂದ್ಯವು 1-1 ರ ಗೋಲುಗಳೊಂದಿಗೆ ಅಂತ್ಯ ಕಂಡಿತು.
ಈ ಪಂದ್ಯದಲ್ಲಿ ರೆಫರಿ ಅಬ್ದುಲ್ರಹ್ಮಾನ್ ಅಲ್-ಜಸ್ಸಿಮ್ ಅವರು 6 ಹಳದಿ ಕಾರ್ಡ್‌ಗಳನ್ನು ತೋರಿಸಿದರು. ಆಟಗಾರರ ನಡುವೆ ಹಲವು ಫೌಲ್‌ಗಳು ಮತ್ತು ಸಂಘರ್ಷಗಳೂ ಕಂಡುಬಂದವು. ಈ ಬೆಳವಣಿಗೆ ಅಭಿಮಾನಿಗಳಲ್ಲಿ ಪಂದ್ಯದ ನಡುನಡುವೆ ರೋಮಾಂಚನ ಉಂಟುಮಾಡಿತ್ತು.
ಇದನ್ನೂ ಓದಿ: ಫಿಫಾ ವಿಶ್ವಕಪ್: ಸೆನೆಗಲ್ ವಿರುದ್ಧ 2-0 ಗೋಲುಗಳಿಂದ ಗೆದ್ದು ಬೀಗಿದ ನೆದರ್‌ಲ್ಯಾಂಡ್