ಸತಾರ( ಮಹಾರಾಷ್ಟ್ರ): ಆರ್ಚರಿ ವಿಭಾಗದಲ್ಲಿ 2020 ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಪ್ರವೀಣ್ ಜಾಧವ್ ಅವರ ಕುಟುಂಬ ಮನೆ ನವೀಕರಿಸುವ ವಿಚಾರವಾಗಿ ನೆರೆಯವರಿಂದ ಬೆದರಿಕೆ ಎದುರಿಸುತ್ತಿದೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರ್ದೆ ಹಳ್ಳಿಯಲ್ಲಿ ಜಾಧವ್ ಮೊದಲು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ನಂತರ ಜಾಧವ್ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ಗೆ ಸೇರಿದ ನಂತರ, ಮಹಾರಾಷ್ಟ್ರ ಆಗ್ರೋ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಒದಗಿಸಿದ ಭೂಮಿಯಲ್ಲಿ ಶೀಟ್ ಛಾವಣಿಯೊಂದಿಗೆ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದರು.
ಇದೀಗ ಆ ಮನೆಯನ್ನು ನವೀಕರಣ ಮಾಡಲು ಹೊರಟಿರುವುದಕ್ಕೆ ಅಕ್ಕಪಕ್ಕದ ಮನೆಯವರು ಬೆದರಿಕೆ ಒಡ್ಡಿ ತಡೆದಿದ್ದಾರೆ ಎಂದು ಜಾಧವ್ ಟೋಕಿಯೋದಿಂದ ಹಿಂದಿರುಗಿದ ನಂತರ ಆತನ ಕುಟುಂಬದವರು ಆತನಿಗೆ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಮನೆಯ ನವೀಕರಣದ ಕುರಿತು ಅವರ ಕುಟುಂಬ ಮತ್ತು ನೆರೆಹೊರೆಯವರ ನಡುವಿನ ವಿವಾದವು ಇದೀಗ ಸ್ಥಳೀಯ ಆಡಳಿತವನ್ನು ತಲುಪಿದೆ ಎಂದು ತಿಳಿದು ಬಂದಿದೆ.
ಪ್ರವೀಣ್ ಜಾಧವ್ ತಂದೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರ ನಮಗೆ ನೀಡಿರುವ ಜಾಗದಲ್ಲಿ ಆ ಮನೆಯನ್ನು ನಿರ್ಮಿಸಿದ್ದೇವೆ. ಆದರೂ ನಮ್ಮ ಅಕ್ಕಪಕ್ಕದ ಮನೆಯವರು ಮನೆಯನ್ನು ನವೀಕರಿಸಲು ಮತ್ತು ಕಟ್ಟಡ ನಿರ್ಮಿಸಲು ವಿರೋಧಿಸುತ್ತಿದ್ದಾರೆ. ಅಲ್ಲದೇ ನೆರೆಹೊರೆಯವರು ನಮ್ಮ ಮನೆಯನ್ನು ಹೊಡೆದು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನಾವು ಇಲ್ಲಿ ತೃಪ್ತಿಯಿಂದ ಬದುಕಲು ಸಾಧ್ಯವಾಗದಿದ್ದರೆ, ಈ ಗ್ರಾಮದಲ್ಲಿ ಏಕೆ ವಾಸಿಸಬೇಕು? ಗ್ರಾಮದಲ್ಲಿ ಯಾವುದೇ ಸಹಕಾರವಿಲ್ಲದಿದ್ದರೆ ನಾವು ಬೇರೆ ಸ್ಥಳಕ್ಕೆ ಹೋಗುತ್ತೇವೆ. ಸರ್ಕಾರವು ನಮಗೆ ಭೂಮಿಯನ್ನು ಒದಗಿಸುವ ಬೇರೆ ಯಾವುದೇ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ನಾವು ಸಿದ್ಧರಿದ್ದೇವೆ " ಎಂದು ರಮೇಶ್ ಜಾಧವ್ ಹೇಳಿದ್ದಾರೆ.
ಇದನ್ನು ಓದಿ:Tokyo Olympics: ಮಹಿಳಾ ಹಾಕಿಯಲ್ಲೂ 'ಗೋಲ್ಡ್' ಕನಸು ಭಗ್ನ..ಇನ್ನು ಕಂಚಿಗಾಗಿ ಸೆಣಸಾಟ!