ನ್ಯೂಯಾರ್ಕ್, ಅಮೆರಿಕ: ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಯುಎಸ್ ಓಪನ್ 2022 ರಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕೋವಿಡ್ ಪ್ರೋಟೋಕಾಲ್‌ನಿಂದಾಗಿ ಜೊಕೊವಿಕ್ ಅವರು ಅಮೆರಿಕಕ್ಕೆ ಪ್ರಯಾಣಿಸಲು ಹಿಂದೆ ಸರಿದಿದ್ದಾರೆ. ಏಕೆಂದರೆ ಅವರು ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲ. ಆಗಸ್ಟ್ 29ರಿಂದ ಆರಂಭವಾಗಲಿರುವ ಅಮೆರಿಕ ಓಪನ್ 2022 ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಸ್ವತಃ ಜೊಕೊವಿಕ್ ಟ್ವೀಟ್ ಮೂಲಕ ಘೋಷಿಸಿದ್ದಾರೆ.
ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್: ಈ ಕುರಿತು ಟ್ವೀಟ್ ಮಾಡಿರುವ ಜೊಕೊವಿಕ್, ದುಃಖಕರವೆಂದರೆ, ಈ ಬಾರಿ ಯುಎಸ್ ಓಪನ್‌ಗಾಗಿ ನ್ಯೂಯಾರ್ಕ್‌ಗೆ ತೆರಳಲು ನನಗೆ ಸಾಧ್ಯವಾಗುವುದಿಲ್ಲ. ನಿಮ್ಮ ಪ್ರೀತಿ ಮತ್ತು ಬೆಂಬಲದ ಸಂದೇಶಗಳಿಗಾಗಿ ಧನ್ಯವಾದಗಳು. ನನ್ನ ಸಹ ಆಟಗಾರರಿಗೆ ಶುಭಾಶಯಗಳು!.. ನಾನು ಉತ್ತಮ ಆಲೋಚನೆ ಮತ್ತು ಸಕಾರಾತ್ಮಕ ಉದ್ದೇಶದಿಂದ ಇರುತ್ತೇನೆ. ಅಲ್ಲದೇ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶಕ್ಕಾಗಿ ಕಾಯಲಿದ್ದೇನೆ. ಟೆನಿಸ್ ಜಗತ್ತಿನಲ್ಲಿ ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಜೊಕೊವಿಕ್ ನಿರ್ಧಾರದ ಬಗ್ಗೆ ಅಭಿಮಾನಿಗಳಿಗೆ ಬೇಸರ: ಇದು ಈ ವರ್ಷದ ಎರಡನೇ ಗ್ರ್ಯಾಂಡ್ ಸ್ಲಾಮ್ ಆಗಿದ್ದು, ಇದರಲ್ಲಿ ಜೊಕೊವಿಕ್ ಭಾಗವಹಿಸದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ಗಿಂತ ಮುಂಚೆಯೇ ಜೊಕೊವಿಕ್ ಅವರನ್ನು ಗಡೀಪಾರು ಮಾಡಲಾಗಿದ್ದು ಇಲ್ಲಿ ಸ್ಮರಿಸಬಹುದು.
ಬೇಸರ ವ್ಯಕ್ತಪಡಿಸಿದ ಪಂದ್ಯಾವಳಿಯ ನಿರ್ದೇಶಕ: ವಿಶ್ವ ಶ್ರೇಯಾಂಕ 6ನೇ ಆಟಗಾರ ನೊವಾಕ್ ಜೊಕೊವಿಕ್ ಅವರ ಈ ಪ್ರಕಟಣೆಯು ಅಮೆರಿಕ ಓಪನ್ 2022 ಟೂರ್ನಿಯ ಡ್ರಾಗೆ ಗಂಟೆಗಳ ಮೊದಲು ಬಂದಿದೆ. ‘ನೊವಾಕ್ ಒಬ್ಬ ಶ್ರೇಷ್ಠ ಚಾಂಪಿಯನ್ ಮತ್ತು 2022 ರ ಯುಎಸ್ ಓಪನ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಏಕೆಂದರೆ ಅವರು ಯುಎಸ್ ಅಲ್ಲದ ನಾಗರಿಕರಿಗೆ ನಡೆಯುತ್ತಿರುವ ಲಸಿಕೆ ನೀತಿಯಿಂದಾಗಿ ದೇಶವನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. 2023 ರ ಅಮೆರಿಕ ಓಪನ್‌ಗೆ ನೊವಾಕ್ ಅವರನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಪಂದ್ಯಾವಳಿಯ ನಿರ್ದೇಶಕ ಸ್ಟೇಸಿ ಅಲ್ಲಾಸ್ಟರ್ ಹೇಳಿದರು.
ಇದೊಂದು ಜೋಕ್ ಎಂದು ಬಣ್ಣಿಸಿದ ಟನಿಸ್ ದಿಗ್ಗಜ: ಜೊಕೊವಿಕ್ ಮೇಲಿನ ನಿಷೇಧವನ್ನು ಟೆನಿಸ್ ದಂತಕಥೆ ಜಾನ್ ಮೆಕೆನ್ರೋ ಅವರು 'ಜೋಕ್' ಎಂದು ಬಣ್ಣಿಸಿದ್ದಾರೆ. ಮೆಕೆನ್ರೋ, 'ಕರೋನಾ ಸಾಂಕ್ರಾಮಿಕವಾಗಿ ಎರಡೂವರೆ ವರ್ಷಗಳಾಗಿವೆ. ಪ್ರಪಂಚದ ಎಲ್ಲ ಭಾಗಗಳ ಜನರು ಇದರ ಬಗ್ಗೆ ಹೆಚ್ಚು ತಿಳಿದಿದ್ದಾರೆ ಎಂದು ನಾನು ಭಾವಿಸುತ್ತೇನೆ.
ಜೊಕೊವಿಕ್ ಆಟವಾಡಲು ಇಲ್ಲಿಗೆ ಪ್ರಯಾಣಿಸಲು ಸಾಧ್ಯವಿಲ್ಲ, ನನಗೆ ಇದು ತಮಾಷೆಯಂತೆ ಕಾಣುತ್ತಿದೆ. ವಿಪರ್ಯಾಸವೆಂದರೆ 2020 ಮತ್ತು 2021 ರಲ್ಲಿ ಕೋವಿಡ್ ಅಲೆಯ ಸಮಯದಲ್ಲಿ ನ್ಯೂಯಾರ್ಕ್‌ನಲ್ಲಿ ಸ್ಪರ್ಧಿಸಲು ಜೊಕೊವಿಕ್‌ಗೆ ಅವಕಾಶ ನೀಡಲಾಯಿತು. ಜೊಕೊವಿಕ್ 2011, 2015 ಮತ್ತು 2018 ರಲ್ಲಿ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ಹೇಳಿದರು.
ಯುಎಸ್ ಟೂರ್ನಿಗೆ ತಯಾರಿ ನಡೆಸಿದ್ದ ಜೊಕೊವಿಕ್: ಕಳೆದ ತಿಂಗಳು ಏಳನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ನಂತರ ನೊವಾಕ್ ಜೊಕೊವಿಕ್ ಟೆನಿಸ್ ಅಂಗಳದಲ್ಲಿ ಇರಲಿಲ್ಲ. 2022 ರ ವಿಂಬಲ್ಡನ್ ಮೂಲಕ ಅವರು 21 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಪುರುಷರ ಪೈಕಿ ರಾಫೆಲ್ ನಡಾಲ್ (22) ಜೊಕೊವಿಕ್ಗಿಂತ ಹೆಚ್ಚು ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊಕೊವಿಕ್ ಕಳೆದ ತಿಂಗಳು ಯುಎಸ್ ಓಪನ್‌ನಲ್ಲಿ ‘ಆಡಲು ತಯಾರಿ ನಡೆಸುತ್ತಿದ್ದೇನೆ’ ಎಂದು ಹೇಳಿದ್ದರು. ಆದರೆ, ಈಗ ಅವರ ಕನಸು ಭಗ್ನಗೊಂಡಿದೆ.
ಲಸಿಕೆ ಹಾಕಿಕೊಳ್ಳದ ನಾಗರಿಕರಿಗೆ ನೋ ಎಂಟ್ರಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ವಿಶ್ವದ ನಂಬರ್ 6ನೇ ಆಟಗಾರ ನೊವಾಕ್ ಜೊಕೊವಿಕ್, ಪ್ರಯಾಣದ ನಿರ್ಬಂಧಗಳ ಕಾರಣ ಡ್ರಾ ಮಾಡುವ ಮೊದಲು ಗುರುವಾರ ಯುಎಸ್ ಓಪನ್ 2022 ಟೂರ್ನಿಯಿಂದ ಹಿಂದೆ ಸರಿದರು. ಲಸಿಕೆ ಹಾಕದ ವಿದೇಶಿ ನಾಗರಿಕರು ಪ್ರಸ್ತುತ ಅಮೆರಿಕಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಅಮೆರಿಕ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್, ರಾಷ್ಟ್ರದ ಆರೋಗ್ಯ ರಕ್ಷಣಾ ಸಂಸ್ಥೆ ಇತ್ತೀಚಿನ ವಾರಗಳಲ್ಲಿ ಲಸಿಕೆ ಹಾಕದ ನಾಗರಿಕರಿಗಾಗಿ ಅದರ ಕೆಲವು ನಿಯಮಗಳನ್ನು ಪರಿಶೀಲಿಸಿದೆ.
ಗ್ರ್ಯಾಂಡ್ ಸ್ಲಾಮ್ಗಳನ್ನು ಕಳೆದುಕೊಳ್ಳಲು ನಾನು ಸಿದ್ಧ: 21 ಪ್ರಮುಖ ಟೆನಿಸ್ ಚಾಂಪಿಯನ್‌ಶಿಪ್‌ಗಳ ಸರದಾರ ಜೊಕೊವಿಕ್, ಭಾಗವಹಿಸುವ ಆಟಗಾರರಿಗೆ ಕೋವಿಡ್ ಲಸಿಕೆ ಹಾಕುವ ಅಗತ್ಯವಿರುವ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳನ್ನು ಕಳೆದುಕೊಳ್ಳಲು ನಾನು ಸಿದ್ಧನಾಗಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ಸುದೀರ್ಘ ಕಾನೂನು ಸಾಹಸದ ನಂತರ ಈ ವರ್ಷದ ಆರಂಭದಲ್ಲಿ ಅವರು ತಮ್ಮ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಲಸಿಕೆ ಹಾಕದ ಕಾರಣ ಜೊಕೊವಿಕ್ ಅವರನ್ನು ದೇಶದಿಂದ ಗಡೀಪಾರು ಮಾಡುವುದರೊಂದಿಗೆ ಈ ಪ್ರಕರಣ ಕೊನೆಗೊಂಡಿತು.
ಓದಿ: Wimbledon 2022 Final: 7ನೇ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಸರ್ಬಿಯಾದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್