ಪುದುಚೇರಿ : ಆಲ್ರೌಂಡರ್ ಶಿವಂ ದುಬೆ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಪಶ್ಚಿಮ ವಲಯ ತಂಡವು ಉತ್ತರ ವಲಯದ ವಿರುದ್ಧ ಗೆದ್ದು ಬೀಗಿತು. ಭಾನುವಾರ ಇಲ್ಲಿನ ಸಿಯೆಚೆಮ್ ಮೈದಾನದಲ್ಲಿ ನಡೆದ ರೌಂಡ್ ರಾಬಿನ್ ದೇವಧರ್ ಟ್ರೋಫಿ ಪಂದ್ಯದಲ್ಲಿ ಪಶ್ಚಿಮ ವಲಯ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಐಪಿಎಲ್ನಲ್ಲಿ ಚೆನ್ನೈ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಶಿವಂ ದುಬೆ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿ 5 ಸಿಕ್ಸರ್ ಮತ್ತು 3 ಬೌಂಡರಿ ಮೂಲಕ 83 ರನ್ ಗಳಿಸಿದರು. ಕಥನ್ ಡಿ ಪಟೇಲ್ ಆರು ಬೌಂಡರಿಗಳೊಂದಿಗೆ 63 ರನ್ ಪೇರಿಸಿ ಪಶ್ಚಿಮ ವಲಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಹೀಗಿತ್ತು ಪಂದ್ಯ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ವಲಯ, 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ 29 ರನ್ ಗಳಿಸಿದರೆ, ಪ್ರಭುಸಿಮ್ರಾನ್ ಸಿಂಗ್ 26 ರನ್ ಗಳಿಸಿ ಔಟಾದರು. ಬಳಿಕ ಉತ್ತಮ ಜೊತೆಯಾಟವಾಡಿದ ಹಿಮಾಂಶು ರಾಣಾ ಮತ್ತು ನಿತೀಶ್ ರಾಣಾ ತಲಾ 54 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹಿಮಾಂಶು ರಾಣಾ ಮತ್ತು ನಿತೀಶ್ ರಾಣಾ 49 ರನ್ಗಳ ಜೊತೆಯಾಟ ಆಡಿದರು. ಬಳಿಕ ಆಗಮಿಸಿದ ಮಂದೀಪ್ ಸಿಂಗ್ 13 ರನ್ ಗಳಿಸಿ ಔಟಾದರೆ, 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಶುಭಂ ರೋಹಿಲ್ಲಾ 56 ರನ್ ಗಳಿಸಿ ನೆರವಾದರು. ನಿಶಾಂತ್ ಸಿಂಧು 11 ರನ್, ಆರ್.ಆರ್.ಧವನ್ 12 ರನ್ ಗಳಿಸಿ ಔಟಾದರು. ಈ ಮೂಲಕ ಉತ್ತರ ವಲಯ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು. ಪಶ್ಚಿಮ ವಲಯದ ಪರ, ಶಾಮ್ಸ್ ಮುಲಾನಿ 3 ವಿಕೆಟ್ ಪಡೆದು ಮಿಂಚಿದರೆ, ಆರ್.ಎಸ್.ಹಂಗರ್ಕರ್, ಸರ್ಫರಾಜ್ ಖಾನ್ ಹಾಗು ರಾಹುಲ್ ತ್ರಿಪಾಠಿ ತಲಾ ಒಂದೊಂದು ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ್ದ ಪಶ್ಚಿಮ ವಲಯದ ಆರಂಭಿಕ ಆಟಗಾರರಾದ ಹೆಚ್.ದೇಸಾಯಿ 56 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಆರಂಭಿಕ ಆಟಗಾರ ಪಿ.ಕೆ.ಪಾಂಚಾಲ್ 14 ರನ್ ಗಳಿಸಿದ್ದಾಗ ಆರ್.ಆರ್.ಧವನ್ ಬೌಲಿಂಗ್ನಲ್ಲಿ ಅಭಿಷೇಕ್ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಬಳಿಕ ಕ್ರೀಸಿಗೆ ಬಂದ ರಾಹುಲ್ ತ್ರಿಪಾಠಿ 3 ರನ್, ಸಮರ್ಥ ವ್ಯಾಸ್ 25 ರನ್ ಗಳಿಸಿ ಔಟಾದರು. ಈ ವೇಳೆ ಜೊತೆಯಾದ ಕಥನ್ ಪಟೇಲ್ ಮತ್ತು ಶಿವಂ ದುಬೆ 138 ರನ್ಗಳ ಜೊತೆಯಾಟ ಆಡಿದರು. ಈ ಮೂಲಕ ಪಶ್ಚಿಮ ವಲಯವು 48.5 ಓವರ್‌ಗಳಲ್ಲಿ 260 ಗಳಿಸಿ ಗೆಲುವಿನ ನಗೆ ಬೀರಿತು. ಉತ್ತರ ವಲಯ ಪರ, ರಿಷಿ ಧವನ್, ಮಾಯಾಂಕ್ ಯಾದವ್, ನಿತೀಶ್ ರಾಣಾ ತಲಾ 1 ವಿಕೆಟ್ ಪಡೆದರು.
ಪಶ್ಚಿಮ ವಲಯವು ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉತ್ತರ ವಲಯವು ನಾಲ್ಕು ಪಂದ್ಯದಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಐದನೇ ಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರ್ ಕಾರ್ಡ್: ಉತ್ತರ ವಲಯ: 50 ಓವರ್‌ಗಳಲ್ಲಿ ಆರು ವಿಕೆಟ್‌ಗೆ 259 (ಎಸ್ ರೋಹಿಲ್ಲಾ 56, ನಿತೀಶ್ ರಾಣಾ 54, ಎಚ್ ರಾಣಾ 54; ಶಮ್ಸ್ ಮುವಾನಿ 3/29)
ಪಶ್ಚಿಮ ವಲಯ: 48.5 ಓವರ್‌ಗಳಲ್ಲಿ 4 ವಿಕೆಟ್‌ಗೆ 260 (ಶಿವಂ ದುಬೆ 83, ಕಥನ್ ಪಟೇಲ್ 63; ರಿಷಿ ಧವನ್ 1/30).
ಇದನ್ನೂ ಓದಿ : ಧೋನಿ ಮಲಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿದ ಗಗನಸಖಿ.. ಖಾಸಗಿತನಕ್ಕೆ ಅವಕಾಶ ಕೊಡಿ ಎಂದು ನೆಟ್ಟಿಗರಿಂದ ಆಕ್ರೋಶ