ಬರ್ಮಿಂಗ್‌ಹ್ಯಾಮ್(ಯುಕೆ): ಕಾಮನ್‌ವೆಲ್ತ್ ಕ್ರೀಡಾಕೂಟ 2022 ರ ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಒಟ್ಟು 202 ಕೆ.ಜಿಯಷ್ಟು ಭಾರ ಎತ್ತುವ ಮೂಲಕ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
ನಿನ್ನೆ ನಡೆದ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ತಮ್ಮ ಮೊದಲ ಪ್ರಯತ್ನದಲ್ಲಿ 81 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಎರಡನೇ ಪ್ರಯತ್ನದಲ್ಲಿ 84 ಕೆಜಿ ಹಾಗೂ ಮೂರನೇ ಪ್ರಯತ್ನದಲ್ಲಿ 86 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು ಬಿಂದ್ಯಾರಾಣಿ ದೇವಿಗಿಂತ ಒಂದು ಕೆ.ಜಿ ಹೆಚ್ಚು (203 ಕೆಜಿ) ವೇಟ್‌ಲಿಫ್ಟ್ ಮಾಡುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಈವರೆಗಿನ ಪದಕ ಸಾಧನೆ: ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 4 ಪದಕ ಸಾಧನೆ ಮಾಡಿದೆ. ಮೀರಾಬಾಯಿ ಚಿನ್ನ, ಸಂಕೇತ್ ಮಹದೇವ್ ಸರ್ಗಾರ್ ಮತ್ತು ಬಿಂದ್ಯಾರಾಣಿ ದೇವಿ ತಲಾ ಒಂದೊಂದು ಬೆಳ್ಳಿ ಮತ್ತು ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: CWG-2022.. ಮೀರಾಬಾಯಿ ಚಾನುಗೆ ಸ್ವರ್ಣ ಪದಕ.. ಚಿನ್ನದ ಹುಡುಗಿಗೆ ಪ್ರಧಾನಿ ಅಭಿನಂದನೆ