ಚಂಡೀಗಡ: ಭಾರತದ ಶ್ರೇಷ್ಠ ಓಟಗಾರ ಮಿಲ್ಖಾಸಿಂಗ್ ಕೋವಿಡ್ 19 ಕಾರಣ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮಗ ಮತ್ತು ಸ್ಟಾರ್ ಗಾಲ್ಫರ್ ಜೀವ್ ಮಿಲ್ಖಾ ಸಿಂಗ್ ಇದು ಮುನ್ನೆಚ್ಚರಿಕೆ ಕ್ರಮವಷ್ಟೇ ಎಂದು ಹೇಳಿದ್ದಾರೆ
91 ವರ್ಷದ ಮಿಲ್ಖಾ ಸಿಂಗ್ ಬುಧವಾರ ಕೋವಿಡ್ 19 ಪಾಸಿಟಿವ್ ದೃಢಪಟ್ಟ ನಂತರ ಚಂಡೀಗಡದ ತಮ್ಮ ನಿವಾಸದಲ್ಲಿ ಹೋಮ್ ಐಸೊಲೇಟ್ ಆಗಿದ್ದರು. ಆದರೆ, ಮುನ್ನೆಚ್ಚರಿಕೆಯ ಭಾಗವಾಗಿ ಮೊಹಾಲಿಯ ಫಾರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನಿನ್ನೆ ಏನೂ ತಿಂದಿರಲಿಲ್ಲ, ತುಂಬಾ ದುರ್ಬಲರಾಗಿದ್ದರು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಪ್ಯಾರಾಮೀಟರ್ ಸರಿಯಾಗಿದೆಯೆಂದು ತೋರುತ್ತಿದೆಯಾದರೂ, ಅವರು ಹಿರಿಯ ವೈದ್ಯರ ಮೇಲ್ವೀಚಾರಣೆಯಲ್ಲಿದ್ದರೆ, ಹೆಚ್ಚು ಸುರಕ್ಷಿತ ಎಂದು ನಾವು ಭಾವಿಸಿದ್ದೇವೆ ಎಂದು ಜೀವ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಫ್ಲೈಯಿಂಗ್ ಸಿಖ್ ಎಂದೇ ಜನಪ್ರಿಯವಾಗಿರುವ 91 ವರ್ಷದ ಮಿಲ್ಖಾ ಸಿಂಗ್ ಕಾಮನ್ವೆಲ್ತ್ ಗೇಮ್ಸ್ನ 400 ಮೀಟರ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಏಕೈಕ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ಅವರಿಗೆ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ತಿಳಿದು ಬಂದಿದೆ.
ಮಿಲ್ಖಾ ಸಿಂಗ್ 1958 ಮತ್ತು 1962ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ಭಾರತದ ಪರವಾಗಿ 1956ರ ಮೆಲ್ಬೋರ್ನ್, 1960ರ ರೋಮ್ ಮತ್ತು 1964ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. 1960ರ 400 ಮೀಟರ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು, ಅವರ ಶ್ರೇಷ್ಠ ಸಾಧನೆಯಾಗಿದೆ.
ಇದನ್ನು ಓದಿ:ದಿ ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ಗೆ ಕೋವಿಡ್ 19 ಪಾಸಿಟಿವ್