ವೇಲೆನ್ಸಿಯಾ(ಸ್ಪೇನ್): ಉಗಾಂಡದ ಜೋಶುವಾ ಚೆಪ್ಟೆಗಿ ಹಾಗೂ ಇಥಿಯೋಪಿಯಾದ ಮಹಿಳಾ ಓಟಗಾರ್ತಿ ಲೆಟೆಸೆನ್ಬೆಟ್ ಗಿಡೇ ವೇಲೆನ್ಸಿಯಾದಲ್ಲಿ ನಡೆದ 10,000 ಮತ್ತು 5,000 ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ದಿನವನ್ನು ಆಯೋಜಕರು ವಿಶ್ವದಾಖಲೆಯ ದಿನ ಎಂದು ಕರೆದಿದ್ದಾರೆ.
ಬುಧವಾರ ಸಂಜೆ ನಡೆದ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಗಿಡೇ ಅವರು ಕೇವಲ 14:06:62 ಸಮಯದಲ್ಲಿ ಗುರಿ ತಲುಪಿದರು. ಇವರು 2008ರಲ್ಲಿ 14::11.15 ಸೆಕೆಂಡ್ನಲ್ಲಿ 5 ಸಾವಿರ ಮೀಟರ್ ಓಡುವ ಮೂಲಕ ವಿಶ್ವದಾಖಲೆ ತಲುಪಿದ್ದ ಇಥಿಯೋಪಿಯಾದವರೇ ಆದ ತಿರುನೇಶ್ ಡಿಬಾಬ ಅವರಿಗಿಂತ 4 ಸೆಕೆಂಡ್ ಬೇಗ ಓಡುವ ಮೂಲಕ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಇನ್ನು ಪುರುಷರ 10,000 ಮೀಟರ್ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಉಗಾಂಡಾದ ಚೆಪ್ಟೆಗಿ 26 ನಿಮಿಷ 11.10 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ 2005ರಲ್ಲಿ 26 ನಿಮಿಷ 17.53 ಸೆಕೆಂಡ್ಗಳಲ್ಲಿ 10,000 ಮೀಟರ್ ಓಡಿ ವಿಶ್ವದಾಖಲೆ ಬರೆದಿದ್ದ ಇಥಿಯೋಪಿಯಾದ ಕೆನೆನಿಸ್ ಬೆಕೆಲೆ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಿದ್ದಾರೆ.
ಚೆಪ್ಟೆಗಿ ಒಂದೇ ಸಮಯದಲ್ಲಿ 5000 ಮತ್ತು 10000 ಮೀಟರ್ ಓಟದ ವಿಶ್ವದಾಖಲೆಯನ್ನು ಹೊಂದಿದ ವಿಶ್ವ10ನೇ ಓಟಗಾರ ಎನಿಸಿಕೊಂಡಿದ್ದಾರೆ.