ನವದೆಹಲಿ: ಇಂಡೋನೇಷ್ಯಾ ಓಪನ್‌ನಲ್ಲಿ ತಮ್ಮ ಐತಿಹಾಸಿಕ ಬಿಡಬ್ಲ್ಯೂಎಫ್ ಸೂಪರ್ 1000 ಪ್ರಶಸ್ತಿ ಗೆದ್ದ ನಂತರ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ತಮ್ಮ ವೃತ್ತಿಜೀವನದ ಉನ್ನತ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಈ ಜೋಡಿಯು ಭಾನುವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಸೂಪರ್ 1000 ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಮಣಿಸಿದೆ.
ಇದರಿಂದ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ನೀಡುವ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದು, ಮೂರನೇ ಸ್ಥಾನವನ್ನು ಪಡೆದಿಕೊಂಡಿದ್ದಾರೆ. ಸಾತ್ವಿಕ್ ಮತ್ತು ಚಿರಾಗ್ 2023ರಲ್ಲಿ ಉತ್ತಮ ಪ್ರವಾಸಿ ವರ್ಷ ಕಾಣುತ್ತಿದ್ದಾರೆ. ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸುವುದರೊಂದಿಗೆ ಸ್ವಿಸ್ ಓಪನ್ ಮತ್ತು ಇಂಡೋನೇಷ್ಯಾ ಓಪನ್ ಸೇರಿದಂತೆ ಎರಡು ವಿಶ್ವ ಪ್ರವಾಸ ಪಂದ್ಯಾವಳಿಗಳಲ್ಲಿ ವಿಜಯಶಾಲಿಯಾಗಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮೂರು ಸ್ಥಾನಗಳ ಏರಿಕೆಯೊಂದಿಗೆ ಟಾಪ್ 20ಕ್ಕೆ ಪ್ರವೇಶಿಸಿ 19ನೇ ವಿಶ್ವ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಲಕ್ಷ್ಯ ಸೇನ್ ಎರಡು ಸ್ಥಾನಗಳ ಏರಿಕೆ ಕಂಡಿದ್ದು 18ನೇ ಶ್ರೇಯಾಂಕ ಪಡೆದಿದ್ದಾರೆ. ವಿಶ್ವದ ಅತ್ಯುನ್ನತ ಶ್ರೇಯಾಂಕದ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ ಹೆಚ್.ಎಸ್. ಪ್ರಣಯ್, ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್ ಸೋಲಿನ ನಂತರ ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಉದಯೋನ್ಮುಖ ಪ್ರತಿಭೆ ಪ್ರಿಯಾಂಶು ರಾಜಾವತ್ ಅವರು 30ನೇ ರ‍್ಯಾಂಕ್ ಪಡೆದುಕೊಂಡಿದ್ದು ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ. ಇವರು ಅಗ್ರ 30 ಶ್ರೇಯಾಂಕಗಳನ್ನು ಪ್ರವೇಶಿಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಎರಡು ಸ್ಥಾನ ಮೇಲಕ್ಕೇರಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನ ಪಡೆದುಕೊಂಡಿದ್ದಾರೆ. ಟೂರ್ನಮೆಂಟ್‌ಗಳಲ್ಲಿ ಸೀಮಿತವಾಗಿ ಭಾಗವಹಿಸಿದ್ದರೂ, ಸೈನಾ ನೆಹ್ವಾಲ್ ಕೂಡ ಒಂದು ಸ್ಥಾನದಿಂದ ಮುನ್ನಡೆಯಲು ಯಶಸ್ವಿಯಾಗಿದ್ದಾರೆ. ಈಗ ವಿಶ್ವದ 31ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ.
ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ, ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಸ್ವಲ್ಪ ಕುಸಿತ ಅನುಭವಿಸಿದ್ದಾರೆ. ಇವರು ಎರಡು ಸ್ಥಾನ ಕೆಳಗಿಳಿದು 41ನೇ ಸ್ಥಾನದಲ್ಲಿದ್ದಾರೆ.
ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ ಎರಡು ಸ್ಥಾನಗಳ ಏರಿಕೆ ಕಂಡು ವಿಶ್ವದ 33ನೇ ಶ್ರೇಯಾಂಕ ಪಡೆದಿದ್ದಾರೆ. ತನಿಶಾ ಕ್ರಾಸ್ಟೊ ಮತ್ತು ಇಶಾನ್ ಭಟ್ನಾಗರ್ ಒಂದು ಸ್ಥಾನ ಕುಸಿದು ಈಗ ವಿಶ್ವದ 38ನೇ ಸ್ಥಾನದಲ್ಲಿದ್ದಾರೆ. ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಎರಡು ಸ್ಥಾನಗಳ ಏರಿಕೆಯೊಂದಿಗೆ ಜಾಗತಿಕ ಶ್ರೇಯಾಂಕದಲ್ಲಿ 33ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ತನಿಶಾ ಕ್ರಾಸ್ಟೊ ಮತ್ತು ಇಶಾನ್ ಭಟ್ನಾಗರ್ ಹಿನ್ನಡೆ ಅನುಭವಿಸಿದ್ದು, ಒಂದು ಸ್ಥಾನ ಕೆಳಕ್ಕೆ ಕುಸಿದು ವಿಶ್ವದ 38ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: Women's Asia cup: ಮಹಿಳಾ ಏಷ್ಯಾ ಕಪ್: ನಾಳೆ ಭಾರತ- ಬಾಂಗ್ಲಾ ಫೈನಲ್