ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿದ್ದ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‌ಐ) ಚುನಾವಣೆ ಡಿಸೆಂಬರ್ 18 ರಂದು ನಡೆಯಲಿದೆ.
ಗುರುಗ್ರಾಮ್ನಲ್ಲಿ ನಡೆದ ಚುನಾವಣೆ ಮತ್ತು ವಾರ್ಷಿಕ ಮಹಾಸಭೆಗಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬಿಎಫ್ಐ ಪ್ರಧಾನ ಕಾರ್ಯದರ್ಶಿ ಜೇ ಕೌಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 2ರ ನಂತರ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
"ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸೆಪ್ಟೆಂಬರ್ ಮೊದಲ ವಾರ ನಡೆಯಬೇಕಿದ್ದ ಚುನಾವಣೆಯನ್ನು ನಾವು ಮೂರು ತಿಂಗಳು ಮುಂದೂಡಬೇಕಾಯಿತು. ನಾವು ಈಗ ವಾರ್ಷಿಕ ಮಹಾಸಭೆ ಮತ್ತು ಚುನಾವಣೆಗೆ ಸಜ್ಜಾಗಿದ್ದೇವೆ" ಎಂದು ಕೌಲಿ ಹೇಳಿದ್ದಾರೆ.
ಬಿಎಫ್‌ಐ ಪ್ರಸ್ತುತ ವಿಮಾನಯಾನ ಕಂಪನಿ ಸ್ಪೈಸ್‌ಜೆಟ್‌ನ ಮಾಲೀಕ ಅಜಯ್ ಸಿಂಗ್ ನೇತೃತ್ವದಲ್ಲಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘದ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆಯ ನಂತರ ಅವರು 2016 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಮಹಾರಾಷ್ಟ್ರ ನಾಯಕ ಆಶಿಶ್ ಶೆಲಾರ್, ಅಜಯ್ ಸಿಂಗ್ ಅವರನ್ನು ಎದುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. 48 ವರ್ಷದ ಶೆಲಾರ್ ಮುಂಬೈ ಕ್ರಿಕೆಟ್ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ.