ನವದೆಹಲಿ: ಕ್ರಿಕೆಟ್ನಲ್ಲಿ ಸಚಿನ್, ಬಾಕ್ಸಿಂಗ್ನಲ್ಲಿ ವಿಜೇಂದರ್ ಸಿಂಗ್, ಶೂಟಿಂಗ್ನಲ್ಲಿ ಅಭಿನವ್ ಬಿಂದ್ರಾ, ಚೆಸ್ನಲ್ಲಿ ವಿಶ್ವನಾಥನ್ ಆನಂದ್.. ಹೇಗೆ ನಂಬರ್ ಒನ್ ಆಗಿದ್ದರೋ ಅದೇ ರೀತಿ ಓಟದಲ್ಲಿ ದಾಖಲೆ ಬರೆದಿರುವ ಮಿಲ್ಖಾ ಸಿಂಗ್ ಹೆಸರುವಾಸಿಯಾಗಿದ್ದಾರೆ. ಇಂದು ಆ 'ಹಾರುವ ಸಿಖ್' 90ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿರುವ ಗೋವಿಂದಪುರದಲ್ಲಿ 1935ರಲ್ಲಿ ಜನಿಸಿದ ಮಿಲ್ಖಾ ಸಿಂಗ್, ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ವೇಳೆ ನಡೆದ ಕೋಮು ಗಲಭೆಯಲ್ಲಿ 12ನೇ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡರು. ಅಂದು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ ಅವರು ಮುಂದೆ ಅಥ್ಲೆಟಿಕ್ಸ್ನಲ್ಲಿ ತ್ರಿವರ್ಣಧ್ವಜ ಹಾರಿಸಲು ಓಡಿದರು.
ಮಿಲ್ಖಾ ಸಿಂಗ್ 1958ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಚಿನ್ನ, 1958ರ ಕಾಮನ್ ವೆಲ್ತ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಸ್ವತಂತ್ರ ಭಾರತದಲ್ಲಿ ಭಾರತಕ್ಕೆ ಕಾಮನ್ವೆಲ್ತ್ನಲ್ಲಿ ಬಂದ ಮೊಟ್ಟ ಮೊದಲ ಸ್ವರ್ಣಪದಕವಾಗಿತ್ತು. ಇವರ ಸಾಧನೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ನೀಡಿದೆ.
ಭಾರತದಲ್ಲಿ 60ಕ್ಕೂ ಹೆಚ್ಚು ವಸಂತಗಳೇ ಉರುಳಿದರೂ ಇನ್ನೂ ಅಥ್ಲೆಟಿಕ್ಸ್ನಲ್ಲಿ ಮತ್ತೊಬ್ಬ ಮಿಲ್ಖಾ ಸಿಂಗ್ರನ್ನು ಕಂಡುಕೊಳ್ಳಲಾಗದಿರುವುದು ಶೋಚನೀಯ ಸಂಗತಿಯಾಗಿದೆ. ಒಲಿಂಪಿಕ್ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವುದನ್ನು ನೋಡಬೇಕೆಂಬುದು ಮಿಲ್ಖಾ ಸಿಂಗ್ ಅವರ ಬಹುವರ್ಷಗಳ ಬಯಕೆಯಾಗಿದೆ.
ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಇಷ್ಟಪಡದ ಮಿಲ್ಖಾ ಸಿಂಗ್ ತಮ್ಮ ಮೊಮ್ಮಕ್ಕಳ ಒತ್ತಾಯಕ್ಕೆ ಮಣಿದು ಮನೆಯಲ್ಲಿ ಕೇಕ್ ಕತ್ತರಿಸಿ ಇಂದು ಸಂಜೆ ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.