ನವದೆಹಲಿ: ಪ್ರತಿಷ್ಠಿತ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಸರ್ಕಾರ ಇ-ಮೇಲ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಇದೀಗ ಭಾರತದ ಸ್ಟಾರ್ ಓಟಗಾರ್ತಿ ಹಿಮಾದಾಸ್ ಅವರ ಹೆಸರನ್ನು ಅಸ್ಸೋಂ ಸರ್ಕಾರ ಶಿಫಾರಸು ಮಾಡಿದೆ.
ಕೇವಲ 20 ವರ್ಷದ ಹಿಮಾದಾಸ್ ಹೆಸರನ್ನ ಇದೀಗ ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ. ಅಸ್ಸೋಂನ ಧಿಂಗ್ ಗ್ರಾಮದ ಹಿಮಾದಾಸ್ ಏಷ್ಯನ್ ಕ್ರೀಡಾ ಕೂಟದ ಚಿನ್ನದ ಪದಕ ಗೆದ್ದಿದ್ದರು. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸತತವಾಗಿ ಐದು ಚಿನ್ನದ ಪದಕ ಮುಡಿಗೇರಿಸಿಕೊಂಡಿರುವ ಸಾಧನೆ ಮಾಡಿದ್ದಾರೆ.
ಹಿಮಾ ದಾಸ್ ಜತೆಗೆ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ, ಕುಸ್ತಿಪಟು ವಿನೇಶ್ ಫೋಗಾಟ್, ಟಿಟಿ ಆಟಗಾರ್ತಿ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಕ್ರಿಕೆಟಿಗ ರೋಹಿತ್ ಶರ್ಮಾ ಹೆಸರು ಶಿಫಾರಸುಗೊಂಡಿವೆ. ಈ ಹಿಂದೆ 2018ರಲ್ಲಿ ಹಿಮಾದಾಸ್ ಅರ್ಜುನ್ ಗೌರವಕ್ಕೆ ಪಾತ್ರರಾಗಿದ್ದಾರೆ.