ಹ್ಯಾಂಗ್ಝೌ, ಚೀನಾ: ಕಳೆದ 9 ದಿನಗಳಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂದಿಗೂ ಹಲವು ಕ್ರೀಡೆಗಳಲ್ಲಿ ಪದಕಗಳ ನಿರೀಕ್ಷೆ ಇದೆ. ಈಗಾಗಲೇ ಏಷ್ಯನ್ ಗೇಮ್ಸ್‌ನ 10ನೇ ದಿನದ ಪದಕ ಪಟ್ಟಿಯಲ್ಲಿ (Asian Games 2023) ಭಾರತದ ಕಂಚಿನ ಖಾತೆ ತೆರೆದಿದೆ. ಇನ್ನು ಹಾಕಿಯಲ್ಲಿ ಭಾರತದ ವನಿತೆಯರು ಪುರಷರಗಿಂತ ನಾವೇನು ಕಮ್ಮಿಲ್ಲ ಎಂದು ಪ್ರದರ್ಶನ ತೋರುತ್ತಿದ್ದಾರೆ.
ಹಾಕಿಯಲ್ಲಿ ಭಾರತೀಯರು ಮಿಂಚು: ಮಹಿಳೆಯರ ಹಾಕಿಯಲ್ಲಿ ಭಾರತ ತಂಡ ಹಾಂಕಾಂಗ್ ವಿರುದ್ಧ 13-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ವಂದನಾ ಮತ್ತು ದೀಪಿಕಾ ಭಾರತದ ಪರ ಹ್ಯಾಟ್ರಿಕ್ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಭಾರತ ಪೂಲ್ ಸುತ್ತಿನಲ್ಲಿ ಅಗ್ರಸ್ಥಾನದಲ್ಲಿ ಉಳಿಯುವುದು ಖಚಿತವಾಗಿದೆ.
ಪ್ರಿ ಕ್ವಾರ್ಟರ್‌ಫೈನಲ್‌ಗೆ ಸಿಂಧು, ಪ್ರಣಯ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಪಿವಿ ಸಿಂಧು ಏಷ್ಯನ್ ಗೇಮ್ಸ್‌ನ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ವಿಶ್ವದ ಏಳನೇ ಶ್ರೇಯಾಂಕದ ಪ್ರಣಯ್ 21-9, 21-12ರಲ್ಲಿ ಮಂಗೋಲಿಯಾದ ಬಟ್ದವ ಮುಂಕ್ಬಾತ್ ಅವರನ್ನು ಸೋಲಿಸಿದರು. ಈಗ ಅವರು ಜೋರ್ಡಾನ್‌ನ ಬಹೇದಿನ್ ಅಹ್ಮದ್ ಅಲ್ಶಾನಿಕ್ ಅಥವಾ ಕಜಕಿಸ್ತಾನ್‌ನ ಡಿಮಿಟ್ರಿ ಪನಾರಿನ್ ಅವರನ್ನು ಎದುರಿಸಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಸಿಂಧು 21-10, 21-15ರಲ್ಲಿ ವಿಶ್ವದ 21ನೇ ಶ್ರೇಯಾಂಕದ ಚೈನೀಸ್ ತೈಪೆಯ ವೆಯ್ ಚಿ ಸು ಅವರನ್ನು ಸೋಲಿಸಿದರು. ಇದೀಗ ಅವರು ಇಂಡೋನೇಷ್ಯಾದ ಕುಸುಮಾ ವರ್ದಾನಿ ಅಥವಾ ಹಾಂಕಾಂಗ್‌ನ ಲಿಯಾಂಗ್ ಕಾ ವಿಂಗ್ ಅವರನ್ನು ಎದುರಿಸಲಿದ್ದಾರೆ.
ಜ್ಯೋತಿ ಸುರೇಖಾಗೆ ಪದಕ ಖಚಿತ: ಏಷ್ಯನ್ ಗೇಮ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಂ ಮಹಿಳೆಯರ ಕಾಂಪೌಂಡ್ ಸಿಂಗಲ್ಸ್ ಫೈನಲ್ ತಲುಪಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. ಈಗ ಅವರ ಕಣ್ಣು ಚಿನ್ನದ ಪದಕದ ಮೇಲಿದೆ.
ಪ್ರಿ ಕ್ವಾರ್ಟರ್‌ಫೈನಲ್‌ಗೆ ಸಿಂಧು, ಪ್ರಣಯ್: ಮಿಶ್ರ ಗುಂಪಿನ ಸ್ಪರ್ಧೆಯಲ್ಲಿ ದೀಪಿಕಾ ಪಳ್ಳಿಕಲ್ ಕಾರ್ತಿಕ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಜೋಡಿ 11-5, 11-5 ರಲ್ಲಿ ಜಪಾನ್ ಎದುರಾಳಿಗಳನ್ನು ಸೋಲಿಸಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರು.
ಪುರುಷರ ಕಬಡ್ಡಿಯಲ್ಲಿ ಭಾರತಕ್ಕೆ ಜಯ: ಏಳು ಬಾರಿಯ ದಾಖಲೆಯ ಚಾಂಪಿಯನ್ ಭಾರತೀಯ ಪುರುಷರ ಕಬಡ್ಡಿ ತಂಡ ಮಂಗಳವಾರ ನಡೆದ ಏಷ್ಯನ್ ಗೇಮ್ಸ್ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 55 - 18 ಅಂಕಗಳಿಂದ ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿತು. ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಈ ಬಾರಿಯೂ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ಮಹಿಳಾ ಕಬಡ್ಡಿ ತಂಡ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 34-34 ಅಂಕಗಳಿಂದ ಡ್ರಾ ಸಾಧಿಸಿತ್ತು.
ಓದಿ:Asian Games Schedule 2023: ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಕಂಚು.. ಇಂದಿನ ಆಟದ ವಿವರ ಹೀಗಿದೆ..