ಪ್ಯಾರೀಸ್: ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ನಡೆದ ಮೆಗಾ ಈವೆಂಟ್ ಅರ್ಚರಿ ವಿಶ್ವಕಪ್‌ನ ಹಂತ-3 ರಲ್ಲಿ ದೀಪಿಕಾ ಕುಮಾರಿ ಭಾನುವಾರ ಒಂದೇ ದಿನ ಮೂರು ಚಿನ್ನದ ಪದಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ದೀಪಿಕಾ ಅರ್ಚರಿಯಲ್ಲಿ ವಿಶ್ವದಲ್ಲೇ ಅಗ್ರ ಸ್ಥಾನಕ್ಕೇರಿದ್ದಾರೆ.
ಮಹಿಳೆಯರ ವೈಯಕ್ತಿಕ ಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ ಅವರು ರಷ್ಯಾದ ಎಲೆನಾ ಒಸಿಪೋವಾ ಅವರನ್ನು 6-0 ಅಂತರದಲ್ಲಿ ಸೋಲಿಸಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು ಚಿನ್ನ ಗೆದ್ದ ಮಿಶ್ರ ಹಾಗೂ ಮಹಿಳಾ ತಂಡಗಳ ಭಾಗವಾಗಿದ್ದರು.
ಇದನ್ನೂ ಓದಿ: ಅರ್ಚರಿ ವಿಶ್ವಕಪ್ : ಒಂದೇ ದಿನ 3 ಚಿನ್ನ ಗೆದ್ದು ಭಾರತವನ್ನು ಅಗ್ರಸ್ಥಾನಕ್ಕೇರಿಸಿದ ದೀಪಿಕಾ ಕುಮಾರಿ
ಅರ್ಚರಿ ಮಿಶ್ರ ಫೈನಲ್ಸ್ ಮುಖೇನ ಒಲಿಂಪಿಕ್ಸ್‌ನಲ್ಲಿ ಪದಕ ಭರವಸೆ ಮೂಡಿಸಿರುವ ದೀಪಿಕಾ ಮತ್ತು ಅವರ ಪತಿ ಅಟಾನು ದಾಸ್ ನೆದರ್‌ಲ್ಯಾಂಡ್‌ನ ಜೋಡಿಯನ್ನು 5-3 ರಿಂದ ಹಿಮ್ಮೆಟ್ಟಿಸಿದರು. ದೀಪಿಕಾ, ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ ಅವರ ಮಹಿಳಾ ತಂಡ ಮೆಕ್ಸಿಕೊ ವಿರುದ್ಧ ಆರಾಮದಾಯಕ ಗೆಲುವಿನೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಈ ಸುದ್ದಿ ಕೇಳಿ ನನಗೆ ಸಂತೋಷವಾಗಿದೆ, ಮುಂದಿನ ದಿನಗಳಲ್ಲಿ ನನ್ನ ಫಾರ್ಮ್ ಅನ್ನು ಹೀಗೆಯೇ ಮುಂದುವರೆಸುತ್ತೆನೆ. ನಾನು ಇನ್ನೂ ಕೆಲವು ಸುಧಾರಣೆಗಳನ್ನು ಕಂಡುಕೊಳ್ಳಬೇಕಾಗಿದ್ದು, ಅದರತ್ತ ಹೆಚ್ಚು ಗಮನ ಹರಿಸುತ್ತೇನೆ" ಎಂದು ದೀಪಿಕಾ ಕುಮಾರಿ ಹೇಳಿದ್ದಾರೆ.