ನವದೆಹಲಿ: ಸೆ.23 ರಿಂದ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಭಾರತದಿಂದ ಒಟ್ಟು 634 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದು ಪಟ್ಟಿಯನ್ನು ಇಂದು ಕ್ರೀಡಾ ಸಚಿವಾಲಯ ಪ್ರಕಟಗೊಳಿಸಿದೆ. ಈ ಕ್ರೀಡಾಪಟುಗಳನ್ನು ಮಾನದಂಡಗಳಿಗೆ ಅನುಗುಣವಾಗಿ ಆಯ್ಕೆ ಮಾಡಲಾಗಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಒಟ್ಟು 850 ಕ್ರೀಡಾಪಟುಗಳನ್ನು ಪ್ರಸ್ತಾಪಿಸಿತ್ತು. ಈ ಪೈಕಿ 634 ಕ್ರೀಡಾಪಟುಗಳನ್ನು ಅಂತಿಮಗೊಳಿಸಿಲಾಗಿದೆ. 2018 ಆವೃತ್ತಿಯಲ್ಲಿ ಒಟ್ಟು 572 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದರು. ಆವೃತ್ತಿಯ ಅಂತಿಮ ವೇಳೆಗೆ ಭಾರತ 16 ಚಿನ್ನ ಸೇರಿದಂತೆ 70 ಪದಕಗಳೊಂದಿಗೆ ಮರಳಿತ್ತು. ಇದೀಗ 19ನೇ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್ಝೌನಲ್ಲಿ ನಡೆಯಲಿದೆ.
ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಗಳಿಗೆ 34 ಪುರುಷರು ಹಾಗು 31 ಮಹಿಳೆಯರು ಸೇರಿ ಒಟ್ಟು 65 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರಲ್ಲಿ ನೀರಜ್ ಚೋಪ್ರಾ, ಪಾರುಲ್ ಚೌಧರಿ ಸೇರಿದಂತೆ ಕೆಲವರು ಭಾರತವನ್ನು ಪ್ರತಿನಿಧಿಸುವ ಸ್ಟಾರ್ ಕ್ರೀಡಾಪಟುಗಳಾಗಿದ್ದಾರೆ.
ಮಹಿಳೆಯರ 49 ಮತ್ತು 55 ಕೆಜಿಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಕ್ರಮವಾಗಿ ಮೀರಾಬಾಯಿ ಚಾನು ಮತ್ತು ಬಿಂದ್ಯಾರಾಣಿ ದೇವಿ ಸೊರೊಖೈಬಾಮ್ ಸ್ಪರ್ಧಿಸಲಿದ್ದಾರೆ. ಬಜರಂಗ್ ಪುನಿಯಾ ಹೆಸರು ಪಟ್ಟಿಯಲ್ಲಿದ್ದು ಜೊತೆಗೆ 11 ಇತರ ಕುಸ್ತಿಪಟುಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ.
ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡ ಪಾಲ್ಗೊಳ್ಳುತ್ತಿದ್ದು, 15 ಆಟಗಾರರ ಪುರುಷರ ತಂಡ ಪ್ರಕಟಗೊಂಡಿದ್ದು, ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ಮಹಿಳಾ ತಂಡವು 15 ಸದಸ್ಯರ ತಂಡದೊಂದಿಗೆ ಭಾಗವಹಿಸಲಿದೆ.
ಫುಟ್ಬಾಲ್ ಸ್ಪರ್ಧೆಗೆ ಪುರುಷ ಮತ್ತು ಮಹಿಳಾ ವಿಭಾಗದಿಂದ ಒಟ್ಟು 44 ಆಟಗಾರರು ಆಯ್ಕೆಗೊಂಡಿದ್ದು ತಲಾ ತಂಡಗಳಲ್ಲಿ 22 ಕ್ರೀಡಾಪಟುಗಳು ಇರಲಿದ್ದಾರೆ. ಇನ್ನುಳಿದಂತೆ ಹಾಕಿಯಲ್ಲೂ 36 ಕ್ರೀಡಾಪಟುಗಳು ಇರಲಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ 18 ಜನ ಆಟಗಾರರು ಇರಲಿದ್ದಾರೆ. ಶೂಟಿಂಗ್ ಸ್ಪರ್ಧೆಯಲ್ಲಿ 30 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ.
ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಹ್ಯಾಂಡ್‌ಬಾಲ್ ಅಥವಾ ರಗ್ಬಿಯಲ್ಲಿ ಯಾವುದೇ ಪುರುಷ ಕ್ರೀಡಾಪಟುಗಳು ಹೆಸರು ಪಟ್ಟಿಯಲಿಲ್ಲ.
ಇದನ್ನೂ ಓದಿ: ISSF ವಿಶ್ವ ಚಾಂಪಿಯನ್‌ಶಿಪ್: 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ 'ಭಾರತೀ'ಯರಿಗೆ ಬಂಗಾರ