ಆಕ್ಲೆಂಡ್: ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಮಂಗಳವಾರ ನಡೆದ ಇಂಗ್ಲೆಂಡ್ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-0 ಗೋಲುಗಳಿಂದ ಗೆಲುವು ಸಾಧಿಸಿದೆ.
ಭಾರತ ತಂಡ ಈ ಟೂರ್ನಿಯ ಮೊದಲ ಪಂದ್ಯದಲ್ಲಿ 4-0 ಗೋಲುಗಳಿಂದ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ನಂತರದ ಎರಡು ಪಂದ್ಯಗಳಲ್ಲಿ 2-1, 1-0ಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧವೇ ಸೋಲು ಕಂಡಿತ್ತು.
ರಾಣಿ ರಾಂಪಾಲ್ ಆರಂಭದಿಂದಲೇ ಬಿರುಸಿನ ದಾಳಿ ನಡೆಸಿದರು. ಅವರ ಆಟದ ಫಲವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಒದಗಿ ಬಂದಿತ್ತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಿಕೊಳ್ಳುವಲ್ಲಿ ಭಾರತ ತಂಡ ವಿಫಲವಾಯಿತು. ಆದರೂ ತಮ್ಮ ಆಕ್ರಮಣ ಆಟ ಮುಂದುವರಿಸಿದ ತಂಡ 47 ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ನಾಯಕಿ ರಾಣಿ ರಾಂಪಾಲ್ ಹೊಡೆದ ಆಕರ್ಷಕ ಶಾಟ್ ಇಂಗ್ಲೆಂಡ್ ಗೋಲ್ ಕೀಪರ್ ಕೈಗೆ ಸಿಗದೆ ಗೋಲುಪೆಟ್ಟಿಗೆ ಸೇರಿತು.

1-0ಯಲ್ಲಿ ಹಿನ್ನಡೆಗೊಳಗಾದ ಇಂಗ್ಲೆಂಡ್, ಪಂದ್ಯ ಮುಗಿಯುವವರೆಗೂ ಚೇತರಿಸಿಕೊಳ್ಳಲಾಗದೆ ಸೋಲುಕಂಡಿತು.
ಪಂದ್ಯದ ಅಂತ್ಯದವರೆಗೂ ನಾವು ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡೆವು. ಆದರೆ ಅವುಗಳನ್ನು ಗೋಲುಗಳಾಗಿ ಬದಲಿಸಿಕೊಳ್ಳುವಲ್ಲಿ ವಿಫಲರಾದೆವು. ಆದರೆ ಪಂದ್ಯವನ್ನು ಗೆದ್ದಿದ್ದು ನಮ್ಮ ಬಲವನ್ನು ಹೆಚ್ಚಿಸಿದೆ. ನಮ್ಮ ಡಿಫೆನ್ಸ್ ಕೂಡ ಬಲಿಷ್ಠವಾಗಿದ್ದು ಎದುರಾಳಿ ಆಟಗಾರ್ತಿಯರನ್ನು ಗೋಲುಗಳಿಸದಂತೆ ತಡೆಯವುದು ಕೂಡ ತಂಡದ ಯಶಸ್ಸಿನ ಒಂದು ಭಾಗ ಎಂದು ಕೋಚ್ ಸ್ಜಾರ್ಡ್ ಮರ್ಜಿನೆ ತಿಳಿಸಿದ್ದಾರೆ.
ಭಾರತ ತಂಡ ಬುಧವಾರ ಇಂಗ್ಲೆಂಡ್ ತಂಡವನ್ನೇ ಮತ್ತೊಮ್ಮೆ ಎದುರಿಸಲಿದೆ.