ರಿಷಿಕೇಶ : ಹಾಕಿ ಪಂದ್ಯದ ವೇಳೆ ಮಹಿಳಾ ಆಟಗಾರ್ತಿಯೊಬ್ಬರು ಎದುರಾಳಿ ತಂಡದ ಆಟಗಾರ್ತಿಗೆ ಹಾಕಿ ಸ್ಟಿಕ್ನಿಂದ ಹೊಡೆದು ಗಾಯಗೊಳಿಸಿದ ಘಟನೆ ರಿಷಿಕೇಶದಲ್ಲಿ ನಡೆದಿದೆ. ಗಾಯಗೊಂಡಿರುವ ಆಟಗಾರ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳಿಂದ ಐಡಿಪಿಎಲ್ ಕ್ರೀಡಾ ಮೈದಾನದಲ್ಲಿ ಅಖಿಲ ಭಾರತ ಮಹಿಳಾ ಹಾಕಿ ಟೂರ್ನಿ ನಡೆಯುತ್ತಿದೆ. ಭಾನುವಾರ ಕೋಲ್ಕತ್ತಾ ಮತ್ತು ಮೀರತ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮೀರತ್ನ ಆಟಗಾರ್ತಿ ಶಿವಾನಿ ಎಂಬಾಕೆ ಕೋಲ್ಕತ್ತಾ ಆಟಗಾರ್ತಿ ಮಮತಾ ಎಂಬುವರಿಗೆ ಹಾಕಿ ಸ್ಟಿಕ್ನಿಂದ ಹೊಡೆದಿದ್ದಾರೆ.
ಹಣಾಹಣಿ ವೇಳೆ ಸ್ಟಿಕ್ ಆಕಸ್ಮಿಕವಾಗಿ ಶಿವಾನಿ ಮುಖಕ್ಕೆ ತಾಗಿದ್ದರಿಂದ ಕೋಪಗೊಂಡು ಮಮತಾ ತೋಳಿಗೆ ಬಲವಾಗಿ ಬಾರಿಸಿದ್ದಾರೆ. ಈ ಘಟನೆ ಸ್ಥಳದಲ್ಲಿ ಕೋಲಾಹಲ ಉಂಟಾಗಿ ಪಂದ್ಯವನ್ನು ಆಯೋಜಕರು ರದ್ದುಗೊಳಿಸಿದ್ದಾರೆ. ಗಾಯಗೊಂಡ ಮಮತಾರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆಂದು ತಿಳಿದು ಬಂದಿದೆ.
ಆಟದ ಮಧ್ಯೆ ಆಟಗಾರ್ತಿಯರ ಮುಂಗೋಪದಿಂದ ಈ ದುರ್ಘಟನೆ ನಡೆದಿದೆ. ಗಾಯಗೊಂಡಿರುವ ಆಟಗಾರ್ತಿ ಮಮತಾಗೆ ಗಂಭೀರ ಗಾಯವಾಗಿಲ್ಲ. ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ಇನ್ನು ಈ ಘಟನೆ ನಂತರ ಎರಡೂ ತಂಡಗಳನ್ನ ಅನರ್ಹಗೊಳಿಸಲಾಯಿತು.
ನಂತರ ಸಮಿತಿಯು ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲು ನಿರ್ಧರಿಸಿತು ಎಂದು ಪಂದ್ಯದ ಆಯೋಜಕ ಗುರ್ವಿಂದರ್ ಸಿಂಗ್ ಗುರ್ರಿ ತಿಳಿಸಿದ್ದಾರೆ. ದಿವಂಗತ ಕರಮಚಂದ್ ಸಿಂಗ್ ಗ್ರೆವಾಲ್ ಅವರ ನೆನಪಿಗಾಗಿ ಈ ಟೂರ್ನಮೆಂಟ್ ಅನ್ನು ಐಡಿಪಿಎಲ್ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ ಆಯೋಜಿಸಲಾಗಿತ್ತು.
ವಿದರ್ಭ ಡ್ರೀಮ್ ಚಂದ್ರಾಪುರ (ಮಹಾರಾಷ್ಟ್ರ), ಮೀರತ್, ಹಾಪುರ್, ಕೋಲ್ಕತ್ತಾ, ಬಿಜ್ನೋರ್, ಕಾಶಿಪುರ್, ಹಲ್ದ್ವಾನಿ, ಹರಿದ್ವಾರ, ಪಂಜಾಬ್, ಡೆಹ್ರಾಡೂನ್ ಮತ್ತು ಐಡಿಪಿಎಲ್ ತಂಡಗಳು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದವು.
ಇದನ್ನೂ ಓದಿ:ಪ್ರೇಯಸಿಯೊಂದಿಗೆ ಶಾರ್ದುಲ್ ಠಾಕೂರ್ ನಿಶ್ಚಿತಾರ್ಥ,ವಿಶ್ವಕಪ್ ನಂತರ ವಿವಾಹ