ದೋಹಾ: ಭಾರತದ ಟಿಟಿ ಪ್ಲೇಯರ್ಸ್ ಮನಿಕಾ ಬಾತ್ರಾ ಮತ್ತು ಹರ್ಮೀತ್ ದೇಸಾಯಿ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ಗೆ ಮರಳುತ್ತಿದ್ದಂತೆ ಮೊದಲ ಟೂರ್ನಿಯಲ್ಲಿಯೇ ಗೆಲುವಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದ್ದಾರೆ.
ಸೋಮವಾರ ನಡೆದ ವರ್ಲ್ಡ್ ಟೇಬಲ್ ಟೆನಿಸ್ ಕಂಟೆಂಡರ್ ಸಿರೀಸ್ನ 2ನೇ ಸುತ್ತಿನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
2019ರ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಬಾತ್ರಾ ಮಹಿಳೆಯರ್ ಸಿಂಗಲ್ಸ್ನಲ್ಲಿ 12-10, 14-12, 11-8ರಲ್ಲಿ ಸ್ಪೇನ್ನ ಸೋಫಿಯಾ ಕ್ಸುವಾನ್ ಜಾಂಗ್ ವಿರುದ್ದ ಜಯಸಿದರೆ, ವಿಶ್ವದ 73ನೇ ಶ್ರೇಯಾಂಕದ ದೇಸಾಯಿ ಭಾರತದವರೇ ಆದ ಆಂಥೋನಿ ಅಮಲ್ರಾಜ್ ಅವರನ್ನು 11-5, 12-10 11-6 ಅಂತರದಿಂದ ಮಣಿಸಿದ್ದಾರೆ.
ಇನ್ನು ಸುತ್ರಿತಾ ಮುಖರ್ಜಿ, ಮುದಿತ್ ದನಿ, ದಿಯಾ ಚಿಟಾಲೆ ತಮ್ಮ ಸಿಂಗಲ್ಸ್ ಅರ್ಹತಾ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಮುಖರ್ಜಿ 5-11, 3-11, 12-10, 9-11ರಲ್ಲಿ ಉಕ್ರೇನ್‌ನ ಟೆಟಿಯಾನಾ ಬಿಲೆಂಕೊ ವಿರುದ್ಧ ಸೋತರೆ, 200 ನೇ ಸ್ಥಾನದಲ್ಲಿರುವ ದನಿ ವಿಶ್ವ ನಂ. 85 ಫಿನ್ಲೆಂಡ್‌ನ ಓಲಾ ಬೆನೆಡೆಕ್ ವಿರುದ್ಧ 8-11, 6-11, 11-8, 6-11ರ ಸೆಟ್ಗಳಲ್ಲಿ ಸೋಲು ಕಂಡರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಚಂತ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ ಅವರು ಟೂರ್ನಿಯಲ್ಲಿ ನೇರ ಅರ್ಹತೆ ಪಡೆದಿದ್ದಾರೆ.