ಲೌಸಾನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(IHF) ಮಂಗಳವಾರ ಘೋಷಿಸಿದ ಎಲ್ಲಾ ವಿಭಾಗದ ವಾರ್ಷಿಕ ಪ್ರಶಸ್ತಿಗಳನ್ನು ಭಾರತೀಯ ಆಟಗಾರರೇ ಪಡೆದು ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ, ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಬೆಲ್ಜಿಯಂ ಒಂದೇ ಒಂದು ಪ್ರಶಸ್ತಿ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಮತದಾನದ ವ್ಯವಸ್ಥೆಯನ್ನು ಕುರಿತು ಕಿಡಿಕಾರಿದೆ.
ಭಾರತದ 5 ಆಟಗಾರರು ಮತ್ತು ಪುರುಷ ಮತ್ತು ಮಹಿಳಾ ತಂಡದ ಕೋಚ್ಗಳು ಗರಿಷ್ಠ ಮತವನ್ನು ಪಡೆದು ಪ್ರತ್ಯೇಕ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತ ಪುರುಷ ತಂಡ ಟೋಕಿಯೋದಲ್ಲಿ 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಇನ್ನು ಮಹಿಳಾ ತಂಡ 4ನೇ ಸ್ಥಾನಗಳಿಸಿಕೊಂಡಿತ್ತು.
ಹರ್ಮನ್ ಪ್ರೀತ್ ಸಿಂಗ್ ವರ್ಷದ ಆಟಗಾರ, ಗುರ್ಜೀತ್ ಕೌರ್ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ, ಪಿಆರ್ ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಮತ್ತು ಶರ್ಮಿಳಾ ದೇವಿ(ಮಹಿಳೆಯರ ವಿಭಾಗ) ಹಾಗೂ ವಿವೇಕ್ ಸಾಗರ್ ಪ್ರಸಾದ್(ಪುರುಷ) ವಿಭಾಗದ ಅತ್ಯುತ್ತಮ ಉದಯೋನ್ಮುಖ ಪ್ರತಿಭೆ ಪ್ರಶಸ್ತಿಗಳನ್ನು ಪಡೆದರು.
ಪುರುಷ ತಂಡದ ಕೋಚ್ ಗ್ರಹಂ ರೀಡ್ ಮತ್ತು ಮಹಿಳಾ ತಂಡದ ಕೋಚ್ ಕೋಚ್ ಶೋರ್ಡ್ ಮರೈನ್(Sjoerd Marijne) ಪುರುಷ ಮತ್ತು ಮಹಿಳಾ ತಂಡಗಳ ಅತ್ಯುತ್ತಮ ಕೋಚ್ ಪ್ರಶಸ್ತಿ ಪಡೆದರು.
ಹಾಕಿ ಬೆಲ್ಜಿಯಂ ಅಸಮಾಧಾನ
ಎಫ್ಐಹೆಚ್ ವಾರ್ಷಿಕ ಪ್ರಶಸ್ತಿ ಘೋಷಿಸುತ್ತಿದ್ದಂತೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದ ಬೆಲ್ಜಿಯಂ ಅಸಮಾಧಾನ ವ್ಯಕ್ತಪಡಿಸಿದ್ದು, ಒಲಿಂಪಿಕ್ಸ್ ಚಾಂಪಿಯನ್ ತಂಡ ಯಾವುದೇ ಒಂದೇ ಒಂದು ಪ್ರಶಸ್ತಿ ಪಡೆಯದಿದ್ದಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದೆ.
" ನಾವು ಸಂಪೂರ್ಣವಾಗಿ ಒಪ್ಪುತ್ತೇವೆ! ಆದರೆ ಇದು ಸರಿಯಾದದ್ದಲ್ಲ! ನಮ್ಮ ಕ್ರೀಡೆಯ ವಿಶ್ವಾಸಾರ್ಹತೆ ಮತ್ತು ಚಿತ್ರಣವು ಮತ್ತೊಮ್ಮೆ ಕಷ್ಟದ ಸಮಯವನ್ನು ಎದುರಿಸುತ್ತಿದೆ " ಎಂದು ಬೆಲ್ಜಿಯಂ ಹಾಕಿ ಮಂಡಳಿ ಟ್ವಿಟರ್ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿ:ಏಷ್ಯನ್ ಗೇಮ್ಸ್ ಮೇಲೆ ಕಣ್ಣು.. ಕಾಮನ್ವೆಲ್ತ್ ಕ್ರೀಡೆಯಿಂದ ಹಿಂದೆ ಸರಿದ ಭಾರತದ ಹಾಕಿ!