ನವದೆಹಲಿ: ಮಣಿಪುರದ ಜ್ಞಾನೇಂದ್ರೊ ನಿಂಗೋಮ್ಬಾಮ್ ಅವರು ಹಾಕಿ ಇಂಡಿಯಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಈಶಾನ್ಯ ಪ್ರದೇಶದಿಂದ ಹಾಕಿ ಇಂಡಿಯಾ ನೇತೃತ್ವ ವಹಿಸಿದ ಮೊದಲ ಅಧ್ಯಕ್ಷರು ಎಂಬ ಖ್ಯಾತಿಗೆ ಒಳಗಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಮೊಹಮ್ಮದ್ ಮುಷ್ತಾಕ್ ಅಹ್ಮದ್ ಅವರು ಜುಲೈನಲ್ಲಿ ರಾಜೀನಾಮೆ ನೀಡಿದ್ದರು. ನಂತರ ಅವರಿಗೆ ಹಿರಿಯ ಉಪಾಧ್ಯಕ್ಷ ಸ್ಥಾನ ನೀಡಲಾಯಿತು. ಈಗ ಮತ್ತೆ ಅವರು ಹಾಕಿ ಇಂಡಿಯಾ ಕಾರ್ಯನಿರ್ವಾಹಕ ಮಂಡಳಿಗೆ ಮರಳಿದ್ದಾರೆ. ಆದರೆ, ಕೆಲ ಒತ್ತಡದಿಂದ ಅಧ್ಯಕ್ಷ ಪಟ್ಟದಿಂದ ಹಿಂದೆ ಸರಿದಿದ್ದರು ಎನ್ನಲಾಗಿದೆ.
ಜ್ಞಾನೇಂದ್ರೊ ಮತ್ತು ಮುಷ್ತಾಕ್ ಇಬ್ಬರೂ ಹಾಕಿ ಆಡಳಿತದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ್ದಾರೆ. ಮತ್ತು ಅವರ ಪರಿಣತಿಯು ಕ್ರೀಡೆಗೆ ಪ್ರಯೋಜನ ನೀಡುತ್ತದೆ. ಹಾಗೂ ಅವರ ಸಲಹೆಗಳು ದೇಶದ ಕ್ರೀಡೆಯನ್ನು ಮತ್ತಷ್ಟು ಉನ್ನತ ಹಂತಕ್ಕೆ ಕೊಂಡೊಯ್ಯಲಿವೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ರಾಜಿಂದರ್ ಸಿಂಗ್ ಹೇಳಿದ್ದಾರೆ.
ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ಜ್ಞಾನೇಂದ್ರೊ ಅವರು, ಮಣಿಪುರ ಹಾಕಿ ಆಡಳಿತದಲ್ಲಿ 2009ರಿಂದ 2014ರವರೆಗೂ ಮುಖ್ಯ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಹತ್ತು ವರ್ಷಗಳಿಂದ ಮಣಿಪುರದ ಹಾಕಿಯೊಂದಿಗೆ ಉತ್ತಮ ಸಂಬಂಧವನ್ನೂ ಹೊಂದಿದ್ದಾರೆ. ಈಶಾನ್ಯ ಪ್ರದೇಶದ ತಳಮಟ್ಟದಲ್ಲಿ ಹಾಕಿ ಅಭಿವೃದ್ಧಿಪಡಿಸುವಲ್ಲಿ ಅವರು ಸಕ್ರಿಯರಾಗಿದ್ದಾರೆ.
ಇಂದು ನಡೆದ 10ನೇ ಹಾಕಿ ಇಂಡಿಯಾ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜ್ಞಾನೇಂದ್ರೊ ಮತ್ತು ಮುಷ್ತಾಕ್ ಅವರು ಅಧಿಕಾರ ಸ್ವೀಕರಿಸಿದರು. ಭಾರತದಲ್ಲಿ ಕ್ರೀಡೆಗೆ ಸಂಬಂಧಿಸಿದ ಮುಂದಿನ ಮಾರ್ಗಸೂಚಿಗಳ ಕುರಿತು ಇಬ್ಬರು ಚರ್ಚಿಸಿದರು. ಕೊರೊನಾದೊಂದಿಗೆ ಮುಂದಿನ ವರ್ಷದ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಯಾವ ರೀತಿ ಎದುರಿಸಬೇಕು ಎಂಬುದರ ಕುರಿತು ಮಾತುಕತೆ ನಡೆಸಿದರು.