ಕೊಲೊರಾಡೋ : ಭಾರತ ಪುರುಷರ ಹಾಕಿ ತಂಡದ ಮಾಜಿ ಕೋಚ್ ಹರೇಂದ್ರ ಸಿಂಗ್ ಅವರು ಅಮೆರಿಕ ಹಾಕಿ ತಂಡದ ಮುಖ್ಯ ಕೋಚ್ ಆಗಿ ಗುರುವಾರ ನೇಮಕಗೊಂಡಿದ್ದಾರೆ.
ಭಾರತದ ಮಾಜಿ ಆಟಗಾರ ಹರೇಂದ್ರ ಸಿಂಗ್ ಹಾಕಿ ಕ್ರೀಡೆಯಲ್ಲಿ ಆಥ್ಲೀಟ್ ಮತ್ತು ಕೋಚ್ ಆಗಿ 3 ದಶಕಗಳ ಅನುಭವ ಹೊಂದಿದ್ದಾರೆ. ಅವರು ಭಾರತದ ಸೀನಿಯರ್ ಹಾಕಿ ತಂಡಕ್ಕೆ 2017-18ರಲ್ಲಿ ಕೋಚ್ ಆಗಿ ಕಾರ್ಯ ನಿರ್ಹಿಸಿದ್ದರು. ಮಹಿಳಾ ತಂಡಕ್ಕೂ ಸ್ವಲ್ಪ ಸಮಯ ತರಬೇತಿ ನೀಡಿದ್ದರು. ಇದೀಗ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧವಾಗಿರುವ ಯುಎಸ್‌ಎ ಹಾಕಿ ತಂಡವನ್ನು ಸಿಂಗ್ ಮುನ್ನಡೆಸಲಿದ್ದಾರೆ.
"ಹ್ಯಾರಿ(ಹರೇಂದ್ರ) ಅವರನ್ನು ಯುಎಸ್ಎ ಫೀಲ್ಡ್ ಹಾಕಿ ತಂಡಕ್ಕೆ ಸೇರಿಸಿಕೊಂಡಿರುವುದಕ್ಕೆ ಮತ್ತು ನಮ್ಮ ಪುರುಷರ ತಂಡವನ್ನು ಮುನ್ನಡೆಸಲಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ಕೋವಿಡ್ 19ನಿಂದ ಕ್ರೀಡೆ ಸ್ಥಗಿತಗೊಳ್ಳುವುದಕ್ಕಿಂತ ಮುನ್ನ ಯುಎಸ್ ಪುರುಷರ ರಾಷ್ಟ್ರೀಯ ತಂಡವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಈಗ ಯುಎಸ್ ಪುರುಷರ ರಾಷ್ಟ್ರೀಯ ತಂಡದ ಉನ್ನತೀಕರಣಕ್ಕೆ ಹ್ಯಾರಿಯಂತಹ ಸಾಮರ್ಥ್ಯ ಮತ್ತು ಅನುಭವವುಳ್ಳ ತರಬೇತುದಾರರೊಂದಿಗೆ ಮುನ್ನಡೆಯುವುದಕ್ಕೆ ನಾವು ಉತ್ಸುಕರಾಗಿದ್ದೇವೆ" ಎಂದು ಯುಎಸ್ಎ ಫೀಲ್ಡ್ ಹಾಕಿಯ ಕಾರ್ಯನಿರ್ವಾಹಕ ನಿರ್ದೇಶಕ ಸೈಮನ್ ಹೊಸ್ಕಿನ್ಸ್ ಹೇಳಿದ್ದಾರೆ.
ಯುಎಸ್ ತಂಡಕ್ಕೆ ಕೋಚ್ ಆಗಿ ನೇಮಗೊಂಡ ನಂತರ ಪ್ರತಿಕ್ರಿಯಿಸಿದ ಹರೇಂದ್ರ ಸಿಂಗ್, ಯುಎಸ್ ತಂಡದ ಕೋಚ್ ಸ್ಥಾನಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಆಟಗಾರರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನನ್ನ ಅನುಭವದೊಂದಿದೆ ಕಂಡುಹಿಡಿಯಲು ಮತ್ತು ಈ ಪಯಣವನ್ನು ಆರಂಭಿಸಲು ಉತ್ಸುಕನಾಗಿದ್ದೇನೆ. ಯುಎಸ್ ತಂಡದ ವೃತ್ತಿಪರ ವ್ಯವಸ್ಥೆಯ ಭಾಗವಾಗಲು ಮತ್ತು ಯುಎಸ್ಎಂಎನ್ಟಿಯ ಬೆಳವಣಿಗೆಗೆ ನೆರವಾಗಲು ಎದುರು ನೋಡುತ್ತಿದ್ದೇನೆ ಎಂದು ಸಿಂಗ್ ತಿಳಿಸಿದ್ದಾರೆ.
ಇವರ ಕೋಚಿಂಗ್ ಅವದಿಯಲ್ಲಿ ಭಾರತ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿತ್ತು. 2018ರ ವಿಶ್ವಕಪ್ನಲ್ಲಿ 5ನೇ ಸ್ಥಾನ, 2018ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಮತ್ತು 2018ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿತ್ತು.
ಇದನ್ನು ಓದಿ:ಐಪಿಎಲ್ 2021: ಮುಂಬೈಗೆ ಹ್ಯಾಟ್ರಿಕ್ ಕನಸು, ಹೊಸ ಹುರುಪಿನಲ್ಲಿ ಆರ್ಸಿಬಿ... ಹೀಗಿದೆ ಎರಡೂ ತಂಡಗಳ ಬಲಾಬಲ!