ಬ್ಯೂನಸ್ ಐರಿಸ್ (ಅರ್ಜೆಂಟೀನಾ) : ಫುಟ್ಬಾಲ್ ದಿಗ್ಗಜ ಮರಡೋನಾ ಹೃದಯಾಘಾತದಿಂದ ನಿಧನರಾದ ಬಳಿಕ ಇದೀಗ ಅವರ ನೂರಾರು ಕೋಟಿ ಮೌಲ್ಯದ ಆಸ್ತಿಗೆ ವಾರಸ್ದಾರ ಯಾರು ಎಂಬ ಪ್ರಶ್ನೆ ಕಾಡ ತೊಡಗಿದೆ.
ಮರಡೋನಾ ಅವರ ಒಟ್ಟು 665 ಕೋಟಿ ರೂ. ಮೌಲ್ಯದ ಆಸ್ತಿಯ ಸ್ವಾಮ್ಯಕ್ಕಾಗಿ ಜಟಾಪಟಿ ಏರ್ಪಡುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ಅವರ ಆಸ್ತಿ ಗಳಿಕೆಯ ಸಂಬಂಧ ಹಲವು ವಿವಾದಗಳಿದ್ದು, ಕೆಲವೊಂದು ಇಂದಿಗೂ ಕೋರ್ಟ್ನಲ್ಲಿವೆ.
ಮರಡೋನಾ ಸಾವಿಗೂ ಮೊದಲೇ ಮೊದಲ ಮಗಳೊಂದಿಗೆ ಆಸ್ತಿ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು. ಈ ವೇಳೆ ನನ್ನೆಲ್ಲಾ ಆಸ್ತಿಯನ್ನೂ ಚಾರಿಟಿಗೆ ನೀಡುವುದಾಗಿ ಬೆದರಿಕೆ ಸಹ ಹಾಕಿದ್ದರು ಎನ್ನಲಾಗ್ತಿದೆ.
ಮರಡೋನಾ ಸಾಯುವ ಮುನ್ನ ತನ್ನ ಆಸ್ತಿ ಯಾರ ಮಡಿಲಿಗೆ ಎಂಬ ಕುರಿತು ವಿಲ್ ಬರೆಯದೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಆಸ್ತಿಗಾಗಿ ಇನ್ನಷ್ಟು ಕಾದಾಟ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೊದಲು ಮರಡೋನಾಗೆ ಒಟ್ಟು ಐವರು ಮಕ್ಕಳಿರುವುದಾಗಿ ಅವರೇ ಒಪ್ಪಿಕೊಂಡಿದ್ದರು.
1989ರಲ್ಲಿ ವಿವಾಹವಾಗಿ, 2003ರಲ್ಲಿ ವಿಚ್ಛೇದನ ಪಡೆದಿದ್ದರು. ಈ ದಾಂಪತ್ಯದಿಂದ ಪಡೆದ ಇಬ್ಬರು ಪುತ್ರಿಯರಲ್ಲದೆ, ವಿವಾಹೇತರ ಸಂಬಂಧದಿಂದ ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಹೊಂದಿದ್ದಾರೆ.
ವಿಚ್ಛೇದಿತ ಪತ್ನಿ ಕ್ಲೌಡಿಯಾ ಅವರಿಂದ ಪಡೆದ ಇಬ್ಬರು ಪುತ್ರಿಯರಾದ ಡಾಲ್ಮಾ ಮತ್ತು ಗಿಯಾನಿನ್ನಾ ಜತೆಗೆ ಮರಡೋನಾ, ಗೆಳತಿ ವೆರೋನಿಕಾ ಒಜೆಡಾ ಅವರಿಂದ ಡೀಗೋ ಫೆರ್ನಾನೊ ಎಂಬ ಪುತ್ರನನ್ನು ಹೊಂದಿದ್ದಾರೆ. ಇಟಲಿಯ ಗಾಯಕಿ ಕ್ರಿಟಿನಿಯಾ ಸಿಂಗಾರಾ ಅವರಿಂದ ಡೀಗೋ ಸಿಯಾಗ್ರಾ ಎಂಬ ಪುತ್ರ ಸಹ ಇವರಿಗಿದ್ದಾನೆ.
ಈ ಹಿನ್ನೆಲೆ ಅವರ ₹665 ಕೋಟಿ ಆಸ್ತಿಗೆ ಒಡೆಯರು ಯಾರಾಗಲಿದ್ದಾರೆ ಎಂಬುದೀಗ ಕುತೂಹಲ ಮೂಡಿಸಿದೆ. ಜೊತೆಗೆ ಆಸ್ತಿ ವಿವಾದ ಇನ್ನಷ್ಟು ತಾರಕಕ್ಕೇರುವ ಸಂಭವವೂ ಇದೆ.