ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ನ ಫುಟ್ಬಾಲ್ ಕ್ಲಬ್ ವೆಸ್ಟ್ ಬ್ರೋಮ್ವಿಚ್ ತಂಡದ ಆಟಗಾರ ರೊಮೈನ್ ಸೇಯರ್ಸ್ ವಿರುದ್ದ ಜನಾಂಗೀಯವಾಗಿ ನಿಂದಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಅಭಿಮಾನಿಯೊಬ್ಬನಿಗೆ ಅಲ್ಲಿನ ಕೋರ್ಟ್ 8 ವಾರಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೈಮನ್ ಸಿಲ್ವುಡ್ ಎಂಬ ಅಭಿಮಾನಿಯೊಬ್ಬ ಜನವರಿ 26 ರಂದು ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ವೆಸ್ಟ್ ಬ್ರೋಮ್ ತಂಡ 5-0 ಅಂತರದಲ್ಲಿ ಸೋಲುಕಂಡ ಬಳಿಕ, ಕಪ್ಪು ಜನಾಂಗದ ಆಟಗಾರ ರೊಮೈನ್ ಸೇಯರ್ಸ್ ಬಗ್ಗೆ ಜನಾಂಗೀಯ ಸಂದೇಶವನ್ನು ಪೋಸ್ಟ್ ಮಾಡಿದ್ದ.
ವೆಸ್ಟ್ ಬ್ರೋಮ್ ತಂಡದಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ 50 ವರ್ಷದ ಅಭಿಮಾನಿ ಸಿಲ್ವುಡ್, ತಾವು ಮಾಡಿರುವ ಪೋಸ್ಟ್ ಮೂರ್ಖತನದ್ದಾಗಿದೆಯೇ ಹೊರತು ಜನಾಂಗೀಯ ನಿಂದನೆಯಲ್ಲ. ಮೊಬೈಲ್ನಲ್ಲಿ ಟೈಪಿಂಗ್ ಮಾಡುವಾಗ ಆಟೋಕರೆಕ್ಟ್ನಿಂದಾಗಿ ಬಫೂನ್(ಮೂರ್ಖ) ಬದಲಿಗೆ ಬಬೂನ್(ಕೋತಿ) ಎಂದು ಪದ ಬದಲಾಗಿದೆ" ಎಂದು ಪೊಲೀಸ್ ವಿಚಾರಣೆ ವೇಳೆ ತಮ್ಮ ಮೇಲಿರುವ ಆರೋಪಕ್ಕೆ ಸಮಜಾಯಿಷಿ ನೀಡಿದ್ದರು.
ಗುರುವಾರ ವಿಚಾರಣೆ ನಡೆಸಿದ ಬರ್ಮಿಂಗ್ಹ್ಯಾಂಗ್ ಕೋರ್ಟ್ನ ನ್ಯಾಯಾಧೀಶ ಬ್ರಿಯೋನಿ, ಸಿಲ್ವುಡ್ಗೆ 8 ವಾರಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
"ನನ್ನ ದೃಷ್ಟಿಯಲ್ಲಿ, ಇದು(ಜನಾಂಗೀಯ ನಿಂದನೆ) ಅತ್ಯಂತ ದೊಡ್ಡ ಹಾನಿಯ ವರ್ಗಕ್ಕೆ ಸೇರುತ್ತದೆ. ಅಲ್ಲದೆ ಇದು ಸಾಯರ್ಸ್ ಮೇಲೆ ವ್ಯಾಪಕ ಪರಿಣಾಮ ಬೀರಿದೆ ಎಂಬುದನ್ನು ಕೋರ್ಟ್ ಒಪ್ಪಿಕೊಳ್ಳುತ್ತದೆ" ಎಂದು ನ್ಯಾಯಧೀಶರು ತಿಳಿಸಿದ್ದಾರೆ.
ಯೋರೋ ಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಇಟಲಿ ವಿರುದ್ಧ ಸೋಲು ಕಂಡಾಗಲೂ ಆಂಗ್ಲ ಅಭಿಮಾನಿಗಳು ತಂಡದಲ್ಲಿದ್ದ ಕಪ್ಪು ಜನಾಂಗದ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದರು. ಇದರ ವಿರುದ್ಧ ವ್ಯಾಪಕ ಟೀಕೆ ಕೇಳಿಬಂದಿತ್ತು. ಇದೀಗ ಮತ್ತೊಮ್ಮೆ ಅದೇ ತಪ್ಪು ಮರುಕಳಿಸಿದ್ದು, ಆರೋಪಿಗೆ ಶಿಕ್ಷೆ ವಿಧಿಸಿರುವುದು ಸಮಂಜಸವಾಗಿದೆ.
ಇದನ್ನೂ ಓದಿ: ಪ್ರತಿಯೊಬ್ಬರೂ ತಂಡಕ್ಕೆ ಕೊಡುಗೆ ನೀಡಿ ಎಬಿಡಿ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದಾರೆ: ಮ್ಯಾಕ್ಸ್ವೆಲ್