ಟುರಿನ್(ಇಟಲಿ): ಪೋರ್ಚುಗಲ್ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಭಾನುವಾರ 2020 ರ ಗೋಲ್ಡನ್ ಫೂಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೋ, ಅಭಿಮಾನಿಗಳ ಆಯ್ಕೆಗೆ ಅವಕಾಶ ನೀಡುವ ಮೊದಲು ವಿಶ್ವದ ಹಲವು ಪತ್ರಕರ್ತರು ಆಯ್ಕೆ ಮಾಡಿದ ಹತ್ತು ಮಂದಿಯ ಕಿರುಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು.
ರೊನಾಲ್ಡೊ ಅವರನ್ನು ಡಿಸೆಂಬರ್ 1 ರಂದು ವಿಜೇತರೆಂದು ಘೋಷಿಸಲಾಯಿತು. ಭಾನುವಾರ ಮೊನಾಕೊ ಪ್ರಿನ್ಸಿಪಾಲಿಟಿಯಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. "ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಒಂದು ಗೌರವ, ನನ್ನ ಹೆಜ್ಜೆ ಗುರುತುಗಳು ಇತರ ಶ್ರೇಷ್ಠ ಚಾಂಪಿಯನ್‌ಗಳಿಗೆ ಹತ್ತಿರವಾಗುವುದಕ್ಕೆ ಸಂತೋಷವಾಗಿದೆ. ನನಗೆ ಮತ ಹಾಕಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉತ್ತಮವಾಗಿ ಆಡಲು ಮತ್ತು ಗೋಲು ಗಳಿಸಲು ನಾನು ಯಾವಾಗಲೂ ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ" ಎಂದು ರೊನಾಲ್ಡೊ ಹೇಳಿದ್ದಾರೆ.
ನಿಯಮಗಳ ಪ್ರಕಾರ, ಈ ಪ್ರಶಸ್ತಿಯನ್ನು ಒಮ್ಮೆ ಮಾತ್ರ ಗೆಲ್ಲಬಹುದು. ಕನಿಷ್ಠ 28 ವರ್ಷ ವಯಸ್ಸಿನ ಸಕ್ರಿಯ ಆಟಗಾರರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ.