ಬಾರ್ಸಿಲೋನಾ: ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನಾಲ್ ಮೆಸ್ಸಿ ಬಾರ್ಸಿಲೋನಾದಿಂದ ವರ್ಗಾವಣೆಗೆ ವಿನಂತಿಸಿದ ಬೆನ್ನಲ್ಲೇ ಅಭಿಮಾನಿಗಳು ಮಂಗಳವಾರ ಕ್ಯಾಂಪ್ ನೌ ಸ್ಟೇಡಿಯಂ ಬಳಿ ಸೇರಿ ಕ್ಲಬ್ ನಾಯಕತ್ವದ ಬಗ್ಗೆ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ.
ಅರ್ಜೆಂಟೀನಾ ಸ್ಟ್ರೈಕರ್ ಬಾರ್ಸಿಲೋನಾ ಕ್ಲಬ್ಗೆ, ತಾವು ಕ್ಲಬ್ನಿಂದ ಹೊರ ಹೋಗುವುದಾಗಿ ಸಂದೇಶ ರವಾನಿಸಿದ ನಂತರ ಈ ಘಟನೆ ನಡೆದಿದೆ.
33 ವರ್ಷದ ಮೆಸ್ಸಿ ಕ್ಲಬ್ಗೆ ಫ್ಯಾಕ್ಸ್ ಕಳುಹಿಸಿದ್ದು, ಈ ಬೇಸಿಗೆಯಲ್ಲಿ ಉಚಿತ ವರ್ಗಾವಣೆಗೊಳ್ಳಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಮೆಸ್ಸಿ ಕ್ಲಬ್ನಿಂದ ಹೊರಹೋಗುವ ಬಯಕೆಯ ಸುದ್ದಿ ಹೊರಬಿದ್ದ ಕೂಡಲೆ ಅಭಿಮಾನಿಗಳು ಕ್ಕ್ಯಾಂಪ್ ನೌಗೆ ಮೆರವಣಿಗೆ ನಡೆಸಿ ಮೆಸ್ಸಿ ನಿರ್ಧಾರದಲ್ಲಿ ಕ್ಲಬ್ನ ಪಾತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಕ್ಲಬ್ನ ತವರು ಕ್ರೀಡಾಂಗಣದ ಹೊರಗೆ ನಿಂತು 'ಮೆಸ್ಸಿ ಸ್ಟೇ' ಮತ್ತು 'ಬರ್ತೊಮಿಯು' ರಿಜೈನ್ ಎಂದು ಘೋಷಣೆ ಕೂಗುತ್ತಿದ್ದಾರೆ. ಮೆಸ್ಸಿ ನಿರ್ಧಾರದ ಹಿಂದೆ ಬಾರ್ಸಿಲೋನಾ ಕ್ಲಬ್ನ ಅಧ್ಯಕ್ಷ ಬರ್ತೊಮಿಯು ಪಾತ್ರವಿದೆ ಎಂಬ ಮಾತು ಕೇಳಿ ಬರುತ್ತಿದೆ.
ಲೆಜೆಂಡ್ ಮೆಸ್ಸಿ ತನ್ನ ಸಂಪೂರ್ಣ ವೃತ್ತಿ ಜೀವನವನ್ನು ಬಾರ್ಸಿಲೋನಾದಲ್ಲೇ ಕಳೆದಿದ್ದಾರೆ. ಅವರು 6 ಬಾರಿ ಪ್ರತಿಷ್ಠಿತ ಬಲೋನ್ ಡಿ'ಒರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬಾರ್ಸಿಲೋನಾ ತಂಡ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ನಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧ 8-2 ಅಂತರ ಹೀನಾಯ ಸೋಲು ಕಂಡ ಬೆನ್ನಲ್ಲೇ ಮೆಸ್ಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.