ನವದೆಹಲಿ: ಎರ್ಲಿಂಗ್ ಹಾಲ್ಯಾಂಡ್ ಮತ್ತು ಕಿಲಿಯಾನ್ ಎಂಬಪ್ಪೆ ಅವರನ್ನು ಜುವೆಂಟಸ್ ಸ್ಟಾರ್ ಹಾಗೂ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಚಿಯಾನೊ ರೊನಾಲ್ಡೊ ಭವಿಷ್ಯದಲ್ಲಿ ಫುಟ್ಬಾಲ್ನ ಅತ್ಯುತ್ತಮ ಆಟಗಾರರಾಗಲಿದ್ದಾರೆಂದು ಹೇಳಿದ್ದಾರೆ.
ವಿಶ್ವ ಸ್ಪೋರ್ಟ್ಸ್ ಮಾಧ್ಯಮದಲ್ಲೇ ನಂಬರ್ 1 ಆಗಿರುವ ಲೈವ್ ಸ್ಕೋರ್ಗೆ ತನ್ನ ಗ್ಲೋಬಲ್ ಬ್ರಾಂಡ್ ಅಂಬಾಸಿಡರ್ ಆಗಿ ರೊನಾಲ್ಡೊ ನೇಮಕವಾಗಿದ್ದಾರೆಂದು ಅಧಿಕೃತ ಘೋಷಣೆ ಮಾಡಿದೆ.
ರಾಯಭಾರಿಯಾಗಿ ಆಯ್ಕೆಯಾದ ನಂತರ ಮಾತನಾಡಿದ ರೊನಾಲ್ಡೊ, ಒಬ್ಬ ಶ್ರೇಷ್ಠ ಆಟಗಾರನಾಗಿ, ಕಷ್ಟಪಟ್ಟು ಶ್ರಮಿಸುವವನಾಗಿ, ಯಾವಾಗಲೂ ತನ್ನ ತಂಡಕ್ಕೆ ಸಹಾಯ ಮಾಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುವವನಾಗಿ ಮತ್ತು ಆಟದ ಇತಿಹಾಸದ ಭಾಗವಾಗಿದ್ದ ಆಟಗಾರಗಾರನಾಗಿ ಸದಾ ನೆನಪಿನಲ್ಲುಳಿದುಕೊಳ್ಳುವ ಆಟಗಾರರಲ್ಲಿ ಒಬ್ಬನಾಗಿರುತ್ತೇನೆ ಎಂದು ನಾನು ಭಾವಿಸುತ್ತೇನೆ ಎಂದು ಲೈವ್ಸ್ಕೋರ್ ವೆಬ್ಸೈಟ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಹಾಗೆಯೇ ಭವಿಷ್ಯದಲ್ಲಿ ಗ್ಲೋಬಲ್ ಕ್ರೀಡೆಯಲ್ಲಿ ಯಾರು ಮುಂಚೂಣಿ ಆಟಗಾರರಾಗಬಹುದು ಎಂದು ಕೇಳಿದ್ದಕ್ಕೆ ಯಾವುದೇ ಹಿಂಜರಿಕೆಯಲ್ಲಿ ನಾರ್ವೆಯ ಎರ್ಲಿಂಗ್ ಹಾಲ್ಯಾಂಡ್ ಮತ್ತು ಫ್ರೆಂಚ್ನ ಕಿಲಿಯಾನ್ ಎಂಬಪ್ಪೆ ಹೆಸರನ್ನು ಹೇಳಿದ್ದಾರೆ.
"ಅತ್ಯುತ್ತಮ ಆಟಗಾರರು ಯಾರು ಎಂದು ಕೇವಲ ಒಬ್ಬ ಆಟಗಾರನನ್ನು ಆಯ್ಕೆ ಮಾಡುವುದು ಕಷ್ಟ, ಆದರೆ ಈ ಹೊಸ ತಲೆಮಾರಿನ ಯುವ ಆಟಗಾರರಾದ ಎರ್ಲಿಂಗ್ ಹಾಲ್ಯಾಂಡ್ ಮತ್ತು ಕಿಲಿಯನ್ ಎಂಬಪ್ಪೆ ಅವರಂತಹ ಆಟಗಾರರನ್ನು ನೋಡುತ್ತಿರುವುದು ರೋಮಾಂಚನಕಾರಿ ಎಂದು ನಾನು ಭಾವಿಸುತ್ತೇನೆ" ಎಂದು ಪೋರ್ಚುಗಲ್ ನಾಯಕ ಹೇಳಿದ್ದಾರೆ.