ಓಯಿರಾಸ್(ಪೋರ್ಚುಗಲ್): ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸ್ವೀಡನ್ ವಿರುದ್ಧದ ಯುಇಎಫ್ಎ ನೇಷನ್ಸ್ ಫುಟ್ ಬಾಲ್ ಲೀಗ್ನಲ್ಲಿ ಪೋರ್ಚುಗಲ್ ಪರ ಅದ್ಭುತ ಗೋಲು ಬಾರಿಸುವ ಮೂಲಕ 100 ಅಂತಾರಾಷ್ಟ್ರೀಯ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ಪರ 2 ಗೋಲು ಭಾರಿಸಿದರು. ಪಂದ್ಯದಲ್ಲಿ ಪೋರ್ಚುಗಲ್ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
'ನಾನು 100 ಗೋಲುಗಳ ಈ ಮೈಲಿಗಲ್ನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದೇನೆ. ನಾನು ದಾಖಲೆಯ ಗೀಳು ಹೊಂದಿಲ್ಲ, ದಾಖಲೆಗಳು ಹಂತ ಹಂತವಾಗಿ ಸ್ವಾಭಾವಿಕ ರೀತಿಯಲ್ಲಿ ಬರುತ್ತವೆ ಎಂಬುದನ್ನು ನಾನು ನಂಬಿದ್ದೇನೆ' ಎಂದು ರೊನಾಲ್ಡೊ ಹೇಳಿದ್ದಾರೆ.
109 ಗೋಲು ಸಿಡಿಸಿರುವ ಇರಾನ್‌ನ ಅಲಿ ಡೇಯಿ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
ಕಳೆದ ಶನಿವಾರ ಕ್ರೊಯೇಷಿಯಾವನ್ನು 4-1 ಗೋಲುಗಳಿಂದ ಸೋಲಿಸಿದ ಪೋರ್ಚುಗಲ್ ತಂಡಕ್ಕೆ ಇದು ಎರಡನೇ ನೇರ ಗೆಲುವಾಗಿದೆ. ಗ್ರೂಪ್ 3 ರಲ್ಲಿ ತಮ್ಮ ಮೂರನೇ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.