ಪ್ಯಾರಿಸ್: ಬಾರ್ಸಿಲೋನಾ ಜೊತೆಗಿನ 21 ವರ್ಷಗಳ ಒಡನಾಟ ಕಡಿದುಕೊಂಡು ಪಿಎಸ್ಜಿ ಸೇರಿರುವ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮ ಹೊಸ ತಂಡವಾದ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡಕ್ಕೆ(ಪಿಎಸ್ಜಿ) ಚಾಂಪಿಯನ್ ಲೀಗ್ ಗೆದ್ದುಕೊಡುವುದು ತಮ್ಮ ಮುಂದಿರುವ ಗುರಿ ಮತ್ತು ಕನಸು ಎಂದು ಹೇಳಿದ್ದಾರೆ.
34 ವರ್ಷದ ಮೆಸ್ಸಿ 4 ಬಾರಿ ತಮ್ಮ ಮಾಜಿ ತಂಡವಾದ ಬಾರ್ಸಿಲೋನಾ ಪರ ಗೆದ್ದಿದ್ದಾರೆ. ಅವರು 2015ರಲ್ಲಿ ತಮ್ಮ ಕೊನೆಯ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದಿದ್ದರು. ಪಿಎಸ್ಜಿ ಇಲ್ಲಿಯವರೆಗೂ ತಮ್ಮ ಮೊದಲ ಚಾಂಪಿಯನ್ಸ್ ಲೀಗ್ ಟೈಟಲ್ಗಾಗಿ ಹವಣಿಸುತ್ತಿದೆ. 2020ರಲ್ಲಿ ಫೈನಲ್ ತಲುಪಿತ್ತಾದರೂ ಬೇಯೆರ್ನ್ ಮ್ಯೂನಿಚ್ ವಿರುದ್ಧ ಸೋಲು ಕಾಣುವ ಮೂಲಕ ನಿರಾಸೆಯನುಭವಿಸಿತ್ತು.
ಮತ್ತೊಮ್ಮೆ ಚಾಂಪಿಯನ್ಸ್ ಗೆಲ್ಲುವುದು ನನ್ನ ಗುರಿ ಮತ್ತು ಕನಸು. ಅದನ್ನು ಗೆಲ್ಲುವುದಕ್ಕಾಗಿಯೇ ನಾವು ಇಲ್ಲಿದ್ದೇವೆ ಎಂದು ಪಿಎಸ್ಜಿ ಜೊತೆಗಿನ 2 ವರ್ಷಗಳ ಒಪ್ಪಂದದ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
ತುಂಬಾ ವರ್ಷಗಳನ್ನು ಕಳೆದ ಬಳಿಕ ಬಾರ್ಸಿಲೋನಾದಿಂದ ನಾನು ಹೊರಬರುವುದು ತುಂಬಾ ಕಠಿಣವಾಗಿತ್ತು. ಇವೆಲ್ಲಾ ಕಳೆದ ವಾರ ಸಂಭವಿಸಿದ ರೀತಿ ಕಠಿಣ ಮತ್ತು ಭಾವನಾತ್ಮಕವಾಗಿತ್ತು. ಅದಕ್ಕಾಗಿ ಯಾರೂ ಸಿದ್ಧರಾಗಿರಲು ಸಾಧ್ಯವಿಲ್ಲ. ಬಾರ್ಸಿಲೋನಾದಲ್ಲಿ ನಾನು ಬದುಕಿದ್ದನ್ನು ಮತ್ತು ಅನುಭವಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಆದರೆ, ನನ್ನ ವೃತ್ತಿ ಮತ್ತು ನನ್ನ ಕುಟುಂಬಕ್ಕಾಗಿ ಈ ಹೊಸ ಹಂತದ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಮೆಸ್ಸಿ ಹೇಳಿದ್ದಾರೆ.
ತಮ್ಮ 13 ವರ್ಷ ವಯಸ್ಸಿನಲ್ಲಿ ಬಾರ್ಸಿಲೋನಾ ಸೇರಿಕೊಂಡರು. ಸತತ 21 ವರ್ಷ ಅಲ್ಲಿ ಕಳೆದಿರುವ ಅವರು ಕ್ಲಬ್ 35 ಪ್ರಶಸ್ತಿ ಎತ್ತಿಹಿಡಿದಿರುವುದಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಒಟ್ಟು 778 ಪಂದ್ಯಗಳಿಂದ 672 ಗೋಲು ಸಿಡಿಸಿದ್ದಾರೆ.
ಇದನ್ನು ಓದಿ:ಅಧಿಕೃತವಾಗಿ ಫ್ರೆಂಚ್ ಕ್ಲಬ್ ಸೇರಿದ ಮೆಸ್ಸಿ.. ಪ್ಯಾರಿಸ್ನ ಹೊಸ ವಜ್ರ ಎಂದ ಪಿಎಸ್ಜಿ