ಬಾರ್ಸಿಲೋನಾ: ಸ್ಪೇನ್ನ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಣವನ್ನು ಸಂಗ್ರಹಿಸುವುದಕ್ಕಾಗಿ ತನ್ನ ತವರು ಸ್ಟೇಡಿಯಂ ಕ್ಯಾಂಪ್ ನೌಗೆ ಹೆಸರಿಡುವ ಹಕ್ಕನ್ನು ಒಂದು ವರ್ಷದ ವರೆಗೆ ಮಾರಾಟ ಮಾಡುವುದಾಗಿ ಮಂಗಳವಾರ ತಿಳಿಸಿದೆ.
ಕೊರೊನಾ ಜಾಗತಿಕ ಮಟ್ಟದ್ದಲ್ಲಿ ಜನ ಜೀವನವನ್ನು ತಲ್ಲಣಗೊಳಿಸುತ್ತಿದೆ. ಪ್ರಪಂಚದ ಪ್ರಬಲ ರಾಷ್ಟ್ರಗಳಾದ ಅಮೆರಿಕ, ಚೀನಾ, ಬ್ರಿಟನ್ ಸೇರಿದಂತೆ ವಿವಿದ ದೇಶಗಳಲ್ಲಿ ಸಾವಿರಾರು ಜನರನ್ನು ಬಲಿತೆಗೆದುಕೊಂಡು ಲಕ್ಷಾಂತರ ಮಂದಿಗೆ ಸೋಂಕಿನಿಂದ ಬಳಲುತ್ತಿದ್ದಾರೆ.
ಸ್ಪೇನಿನಲ್ಲೂ 2 ಲಕ್ಷಕ್ಕೂನ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 20,000 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪ್ರತಿದಿನ 2 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದರೆ , 200ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತನ್ನ ಸ್ಟೇಡಿಯಂಗೆ ಹೆಸರಿಡುವ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಸಂಗ್ರಹವಾಗುವ ಸಂಪೂರ್ಣ ಹಣವನ್ನು ದೇಣಿಗೆ ನೀಡುವುದಾಗಿ ಸ್ಪ್ಯಾನಿಷ್ ಕ್ಲಬ್ನ ಕಾರ್ಯನಿರ್ವಾಹಕ ಮಂಡಳಿ ತಿಳಿಸಿದೆ.
ಕ್ಯಾಂಪ್ ನೌ ಯುರೋಪ್ನ ಅತಿದೊಡ್ಡ ಕ್ರೀಡಾಂಗಣವಾಗಿದ್ದು, ಇಲ್ಲಿ 99,000 ಆಸನ ವ್ಯವಸ್ಥೆಯಿದೆ. ಈ ಕ್ರೀಡಾಂಗಣ 1957ರಿಂದ ಯಾವುದೆ ಸ್ಪಾನ್ಸರ್ ಪಡೆದಿರಲಿಲ್ಲ.
ಇದೇ ಮೊದಲ ಬಾರಿಗೆ ಬೇರೊಬ್ಬರು ಅವರಿಗಿಷ್ಟದ ಹೆಸರನ್ನು ಕ್ಯಾಂಪ್ ನೌಗೆ ಇಡುವ ಅವಕಾಶ ಸಿಕ್ಕಿದೆ. ಇದಿರಿಂದ ಬರುವ ಆದಾಯವನ್ನು ಬಾರ್ಸಿಲೋನಾಗೆ ಸೇರುವುದಿಲ್ಲ, ಬದಲಾಗಿ ನಾವು ಮಾನವೀಯ ಕಾರ್ಯಕ್ರಮಕ್ಕೆ ನೀಡಲು ನಿರ್ಧರಿಸಿದ್ದೇವೆ ಎಂದು ಕ್ಲಬ್ ವೈಸ್ ಪ್ರೆಸಿಡೆಂಟ್ ಹಜೋರ್ಡಿ ಕಾರ್ಡೊನರ್ ತಿಳಿಸಿದ್ದಾರೆ.