ಲೀಡ್ಸ್(ಯುಕೆ): ಜುವೆಂಟಸ್ ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ತನ್ನ ತವರೂರಾದ ಪೋರ್ಚುಗಲ್ನಿಂದ ಎರಡು ತಿಂಗಳ ನಂತರ ಇಟಲಿಗೆ ಮರಳಿದ್ದು, 14 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸೋಮವಾರ ರೊನಾಲ್ಡೊ ಮತ್ತು ಅವರ ಕುಟುಂಬ ತಮ್ಮ ಖಾಸಗಿ ವಿಮಾನದಲ್ಲಿ ರಾತ್ರಿ 10.20ಕ್ಕೆ ಟರಿನ್ ಏರ್ಪೋರ್ಟ್ಗೆ ಬಂದಿಳಿದಿದ್ದಾರೆ ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.
ಪೋರ್ಚುಗಲ್ನಲ್ಲಿ ಎರಡು ತಿಂಗಳ ಹೋಮ್ ಕ್ವಾರಂಟೈನ್ ಮುಗಿಸಿರುವ ರೊನಾಲ್ಡೊ ಮತ್ತೆ ಇಟಲಿಯಲ್ಲೂ 2 ವಾರಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.
35 ವರ್ಷದ ಆಟಗಾರ ಸಿರೀಸ್ ಎ ಗೇಮ್ನಲ್ಲಿ ಜುವೆಂಟಸ್ ಪರ ಆಡುತ್ತಿದ್ದರು, ಇಂಟರ್ ಮಿಲಾನ್ ವಿರುದ್ಧ ಮಾರ್ಚ್ 8ರಂದು ನಡೆದಿದ್ದ ಪಂದ್ಯದಲ್ಲಿ ಜುವೆಂಟಸ್ 2-0ಯಲ್ಲಿ ಗೆಲುವು ಸಾಧಿಸಿತ್ತು. ಆದರೆ, ಕೊರೊನಾ ವೈರಸ್ ದೇಶಾದ್ಯಂತ ಹೆಚ್ಚಾದ್ದರಿಂದ ಇಟಲಿಯ ಫುಟ್ಬಾಲ್ ಲೀಗ್ ರದ್ದುಗೊಳಿಸಲಾಗಿತ್ತು. ಇಲ್ಲಿ ಮಾರಕ ರೋಗಕ್ಕೆ 29,000 ಮಂದಿ ಸಾವನ್ನಪ್ಪಿದ್ದರು.
ಇಂಟರ್ ಮಿಲಾನ್ ವಿರುದ್ಧ ಪಂದ್ಯದ ನಂತರ ರೊನಾಲ್ಡೊ ತಾಯಿಯ ಪಾರ್ಶವಾಯುವಿಗೆ ತುತ್ತಾಗಿದ್ದರಿಂದ ತನ್ನ ತವರೂರಾದ ಮಡೈರಾಗೆ ಹಿಂತಿರುಗಿದ್ದರು. ಇದೀಗ ಜುವೆಂಟಸ್ ತರಬೇತಿಗಾಗಿ 10 ವಿದೇಶಿ ಆಟಗಾರರಿಗೆ ಕರೆ ನೀಡಿದ ಹಿನ್ನೆಲೆ ರೊನಾಲ್ಡೊ ಮತ್ತೆ ಇಟಲಿಗೆ ಮರಳಿದ್ದಾರೆ.