ನವದೆಹಲಿ: ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಇದೇ ತಿಂಗಳು ನಡೆಯಲಿರುವ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟ್ರೆಂಟ್ಬೌಲ್ಟ್ ಬೌಲಿಂಗ್ಗೆ ರೋಹಿತ್ ಶರ್ಮಾ ಯಾವ ರೀತಿ ಉತ್ತರ ಕೊಡಲಿದ್ದಾರೆ ಎಂದು ನೋಡುವುದಕ್ಕೆ ಎದುರು ನೋಡುತ್ತಿದ್ದೇನೆ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಜೂನ್ 18-22ರ ವರೆಗೆ ಸೌತಾಂಪ್ಟನ್ನ ಏಜಿಯಸ್ ಬೌಲ್ನಲ್ಲಿ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡೆಯಲಿದೆ. ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಸಂಯೋಜನೆ ಭಾರತೀಯರಿಗೆ ಸವಾಲಾಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರಿಬ್ಬರು ಎರಡೂ ರೀತಿಯಲ್ಲೂ ಚೆಂಡನ್ನೂ ಮೂವ್ ಮಾಡಬಲ್ಲರು ಮತ್ತು ಅವರಿಬ್ಬರ ಬೌಲಿಂಗ್ ಪಾಲುದಾರಿಕೆ ಅದ್ಭುತವಾಗಿರುತ್ತದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್ ಹೇಳಿದ್ದಾರೆ.
ಇನ್ನು ರೋಹಿತ್ ಶರ್ಮಾ 2014ರ ಪ್ರವಾಸದಲ್ಲಿ ಇಂಗ್ಲೆಂಡ್ ಪಿಚ್ಗಳಲ್ಲಿ ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಈ ಬಾರಿ ನೆರವಾಗಲಿದೆ ಎಂದು ಮಾಜಿ ಸ್ಫೋಟಕ ದಾಂಡಿಗ ಹೇಳಿದ್ದಾರೆ.
ರೋಹಿತ್ ಒಬ್ಬ ಅತ್ಯುತ್ತಮ ಬ್ಯಾಟ್ಸ್ಮನ್ ಮತ್ತು ಅವರು ಈ ಹಿಂದೆಯೇ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡಿದ್ದಾರೆ. ಅವರು ಆರಂಭಿಕರಾಗಿ ಇತ್ತೀಚಿಗೆ ಉತ್ತಮ ಪ್ರದರ್ಶನ ತೋರುತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಹಾಗಾಗಿ ಅವರು ಇಂಗ್ಲೆಂಡ್ ಪರಿಸ್ಥಿತಿಯನ್ನ ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಅವರು ರನ್ಗಳಿಸುತ್ತಾರೆ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ಖಂಡಿತವಾಗಿ ಯಾರೇ ಆರಂಭಿಕನಾದರೂ, ಆತ ಹೊಸ ಚೆಂಡಿನಲ್ಲಿ ಮೊದಲ 10 ಓವರ್ಗಳ ಆಟವನ್ನು ಬಹಳ ಎಚ್ಚರಿಕೆಯಿಂದ ಆಡಿ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ರೋಹಿತ್ಗೆ ಈ ಬಾರಿ ತಮ್ಮ ನೆಚ್ಚಿನ ಹೊಡೆತಗಳ ಶ್ರೇಣಿಯನ್ನು ತೋರಿಸಲಿದ್ದಾರೆ ಎಂಬುದರ ಬಗ್ಗೆ ನನಗೆ ಖಚಿತತೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: WTC ಫೈನಲ್ನಲ್ಲಿ ಇಶಾಂತ್ ಬದಲಿಗೆ ಈತನನ್ನು ಆಡಿಸಲು ಬಯಸುತ್ತೇನೆ: ಹರ್ಭಜನ್ ಸಿಂಗ್