ಹೈದರಾಬಾದ್: ಭಾರತದ ಕ್ರಿಕೆಟ್ ಮೈದಾನಗಳು ಹೆಚ್ಚು ಸ್ಪಿನ್ ಸ್ನೇಹಿಯಾಗಿರುತ್ತದೆ. ಇಂತಹ ವಿಕೆಟ್ನಲ್ಲಿ ಚಹಾಲ್ ಅವರನ್ನು ವಿಶ್ವಕಪ್ ತಂಡದಲ್ಲಿ ಆಡಿಸುವುದು ಸೂಕ್ತ ಆಯ್ಕೆ ಆಗಬಹುದಿತ್ತು ಎಂದು ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಈಗ ಪ್ರಕಟಿತ ಆಗಿರುವ 15 ಜನ ಸದಸ್ಯರ ವಿಶ್ವಕಪ್ ತಂಡ ಸಮತೋಲಿತವಾಗಿದೆ ಎಂದು ಹೇಳಿದ್ದಾರೆ.
ಭಾರತ ತಂಡದಲ್ಲಿ ಸ್ಟಾರ್ ಆಲ್ರೌಂಡರ್ ಆಗಿದ್ದ ಯುವರಾಜ್ ಸಿಂಗ್ ಪ್ರಕಟಿತ ವಿಶ್ವಕಪ್ ತಂಡದ ಬಗ್ಗೆ ಮಾಧ್ಯಮ ಒಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು"ನಮ್ಮ ತಂಡದ ಸಮತೋಲನ ಉತ್ತಮವಾಗಿದೆ. ನಾವು ಭಾರತದಲ್ಲಿ ಆಡುತ್ತಿರುವ ಕಾರಣ ಮತ್ತು ಸ್ಪಿನ್ ಪಿಚ್‌ಗಳು ಇರುವುದರಿಂದ ಯುಜ್ವೇಂದ್ರ ಚಹಾಲ್ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ, ಚಹಾಲ್ ರಹಿತವಾಗಿಯೂ ಇದು ಉತ್ತಮ ಸಮತೋಲನದಿಂದ ಕೂಡಿರುವ ತಂಡವಾಗಿ ಕಂಡುಬರುತ್ತಿದೆ" ಎಂದು ಹೇಳಿದ್ದಾರೆ.
"ತಂಡದ ಆಯ್ಕೆ ಸ್ವಲ್ಪ ಆಶ್ಚರ್ಯಕರವಾಗಿತ್ತು, ಏಕೆಂದರೆ ಯುಜ್ವೇಂದ್ರ ಚಹಾಲ್ ಪಂದ್ಯಗಳನ್ನು ಗೆಲ್ಲುವಂತೆ ಮಾಡುವ ಲೆಗ್ ಸ್ಪಿನ್ನರ್ ಆಗಿರುವುದರಿಂದ ಉತ್ತಮ ಆಯ್ಕೆಯಾಗಿದ್ದರು ಎಂದು ನಾನು ಹೇಳುತ್ತೇನೆ. ನಾನು ವಾಷಿಂಗ್ಟನ್ ಸುಂದರ್ ಯುವಕ ಮತ್ತು ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಆದರೆ ಕೊನೆಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ಅಗತ್ಯ ಆಯ್ಕೆ ಮಾಡಿಕೊಂಡಿದ್ದಾರೆ " ಎಂದು ಯುವರಾಜ್ ಹೇಳಿದ್ದಾರೆ.
ಏಷ್ಯಾಕಪ್ನ ಸೂಪರ್ 4 ಹಂತದ ಬಾಂಗ್ಲದೇಶ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾದರು. ಏಷ್ಯಾಕಪ್ನ ಫೈನಲ್ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಸರಣಿಯ ಪಂದ್ಯದಲ್ಲಿ ಅಕ್ಷರ್ ಜಾಗಕ್ಕೆ ಅಶ್ವಿನ್ಗೆ ಕರೆ ನೀಡಲಾಗಿತ್ತು. 21 ತಿಂಗಳ ನಂತರ ಅಶ್ವಿನ್ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳನ್ನು ಆಡಿದ ಅವರು 4 ವಿಕೆಟ್ ಪಡೆದು ಉತ್ತಮ ಕಮ್ಬ್ಯಾಕ್ ಮಾಡಿದ್ದರು.
ಅಕ್ಷರ್ ಚೇತರಿಸಿಕೊಳ್ಳದ ಕಾರಣ ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಆಯ್ಕೆಗೆ ಸ್ಪರ್ಧೆ ಏರ್ಪಟ್ಟಿತ್ತು. ಟೆಸ್ಟ್ನ ನಂ.1 ಸ್ಪಿನ್ನರ್ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಬಿಸಿಸಿಐನ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಅಕ್ಷರ್ ಚೇತರಿಸಿಕೊಳ್ಳಲು ಇನ್ನು ನಾಲ್ಕರಿಂದ ಐದು ವಾರ ಬೇಕು ಎನ್ನಲಾಗಿದೆ.
ವಿಶ್ವಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ