ಪುಣೆ (ಮಹಾರಾಷ್ಟ್ರ): ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ವೇಳೆ ಕುಸಿದುಬಿದ್ದು ಕಾಲು ನೋವಿಗೆ ತುತ್ತಾಗಿದ್ದಾರೆ. ಇದರಿಂದ ಅವರು ಮೈದಾನದಿಂದ ಹೊರಹೋದರು.
ಆರಂಭಿಕರಾದ ತನ್ಜಿದ್ ಹಸನ್ ಮತ್ತು ಲಿಟನ್ ದಾಸ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾಗ 9 ನೇ ಓವರ್ ಬೌಲಿಂಗ್ ಮಾಡಲು ಹಾರ್ದಿಕ್ ಕಣಕ್ಕಿಳಿದರು. ಓವರ್ನ ಮೂರನೇ ಎಸೆತವನ್ನು ಲಿಟ್ಟನ್ ದಾಸ್ ಸ್ಟ್ರೈಟ್ ಡ್ರೈವ್ ಆಡಿದಾಗ ಬಲಗಾಲಿನಿಂದ ನಿಲ್ಲಿಸಲು ಯತ್ನಿಸುತ್ತಿರುವ ವೇಳೆ ನಿಯಂತ್ರಣ ತಪ್ಪಿ ಕುಸಿದು ಬಿದ್ದರು. ಈ ವೇಳೆ ಕಾಲು ತಿರುಗಿದ್ದರಿಂದ ಪಾದ ಉಳುಕಿತು. ನೋವಿನಿಂದ ಮೈದಾನದಲ್ಲೇ ಬರೋಡಾ ಆಲ್‌ರೌಂಡರ್ ಕುಳಿತರು.
ಮೈದಾನಕ್ಕೆ ಬಂದ ತಂಡದ ಫಿಸಿಯೋ ಹಾರ್ದಿಕ್ ಪಾಂಡ್ಯರನ್ನು ಪರೀಕ್ಷಿಸಿದರು. ನೋವಿನಿಂದ ಕೆಲಕಾಲ ಏಳಲಾಗದೇ ಆಟಗಾರ ಪಿಚ್ ಮೇಲೆಯೇ ಕುಳಿತಿದ್ದರು. ಬಲ ಪಾದಕ್ಕೆ ಸ್ಟ್ರಾಪ್ ಮಾಡಿದ ನಂತರ ಎದ್ದು ಮತ್ತೆ ಬೌಲಿಂಗ್ಗೆ ಅಣಿಯಾದಾಗ ನೋವು ಹೆಚ್ಚಾಯಿತು. ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ನಾಯಕನಿಗೆ ತಿಳಿಸಿ ಫಿಸಿಯೋ ಜೊತೆಗೆ ಮೈದಾನದಿಂದ ಹೊರನಡೆದರು.
ಕೊಹ್ಲಿ ಬೌಲಿಂಗ್: ಹಾರ್ದಿಕ್ ಪಾದದ ನೋವಿನಿಂದಾಗಿ ಹೊರನಡೆದ ಬಳಿಕ ಉಳಿದ 3 ಎಸೆತಗಳನ್ನು ಹಾಕಲು ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಚೆಂಡು ನೀಡಿದರು. ತಮ್ಮದೇ ಶೈಲಿಯಲ್ಲಿ ಮೂರು ಎಸೆತಗಳನ್ನು ಮುಗಿಸಿದ ಕೊಹ್ಲಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲ ಪ್ರೇಕ್ಷಕರು ಕೊಹ್ಲಿ..ಕೊಹ್ಲಿ.. ಎಂದು ಕೂಗಿ ಚಿಯರ್ ಮಾಡಿದರು. ಪಾಂಡ್ಯ ಮೂರು ಎಸೆತದಲ್ಲಿ 8 ರನ್ ನೀಡಿದರೆ, ಕೊಹ್ಲಿ ಅಷ್ಟೇ ಎಸೆತದಲ್ಲಿ 2 ರನ್ ನೀಡಿದರು. ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ ಕ್ಷೇತ್ರರಕ್ಷಣೆಗೆ ಇಳಿದರು. ಹಾರ್ದಿಕ್ ಪಾಂಡ್ಯ ಮತ್ತೆ ಅಂಗಳಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಇನ್ನೂ, 30 ಓವರ್ ಮುಕ್ತಾಯಕ್ಕೆ ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ. ಆರಂಭಿಕರಾದ ತನ್ಜಿದ್ ಹಸನ್, ಲಿಟ್ಟನ್ ದಾಸ್ ಅರ್ಧಶತಕ ಬಾರಿಸಿದರು. ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾಕ್ಕೆ ಸ್ಪಿನ್ನರ್ ಸರ್ ರವೀಂದ್ರ ಜಡೇಜಾ ಡಬಲ್ ಸ್ಟ್ರೋಕ್ ನೀಡಿ, ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸುವಂತೆ ಮಾಡಿದರು.
ಇದನ್ನೂ ಓದಿ: 'ರೋಹಿತ್ ಕ್ರಿಕೆಟ್ ವಿಶ್ವಕಪ್ ಎತ್ತಿ ಹಿಡಿಯುವವರೆಗೂ ನಾನು ಡೇಟಿಂಗ್ ಮಾಡುವುದಿಲ್ಲ': ಮಹಿಳಾ ಅಭಿಮಾನಿಯ ಕೂಗು..