ಮೌಂಟ್ ಮೌಂಗನ್ಯುಯಿ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಮಹಿಳಾ ತಂಡ ಮಂಗಳವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಸುಲಭ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 191 ರನ್ಗಳ ಸಾಧಾರಣ ಗುರಿ ನೀಡಿತ್ತು. ಈ ಮೊತ್ತವನ್ನು ಆರಂಭಿಕ ಬ್ಯಾಟರ್ ಅಲಿಸ್ಸಾ ಹೀಲಿ ಅವರ ಸ್ಫೋಟಕ 72 ರನ್ಗಳ ನೆರವಿನಿಂದ ಆಸೀಸ್ ತಂಡ 3 ವಿಕೆಟ್ ಕಳೆದುಕೊಂಡು, ಇನ್ನೂ 92 ಎಸೆತಗಳಿರುವಂತೆ ತಲುಪಿತು.
191 ರನ್ಗಳ ಗುರಿ ಬೆನ್ನಟ್ಟಿದ ಕಾಂಗರೂ ಪಡೆಗೆ ಆರಂಭಿಕ ಬ್ಯಾಟರ್ ಹೀಲಿ ಮತ್ತು ರೇಚಲ್ ಹೇನ್ಸ್ ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟ ನೀಡಿದರು. ತಮಗೆ ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡ ಈ ಇಬ್ಬರು ಆರಂಭಿಕ ಬ್ಯಾಟರ್ಸ್ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ರನ್ ಕಲೆ ಹಾಕಿದರು.
ಹೇನ್ಸ್ 34 ಎಸೆತಗಳಲ್ಲಿ 7 ಬೌಂಡರಿ ಸಹಿತ 34 ರನ್ಗಳಿಸಿ ನಶ್ರಾ ಸಂಧುಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕಿ ಲ್ಯಾನಿಂಗ್ 37 ಎಸೆತಗಳಲ್ಲಿ 6 ಬೌಂಡರಿಸಹಿತ 35 ರನ್ಗಳಿಸಿದರು. ವಿಕೆಟ್ ಕೀಪರ್ ಹೀಲಿ 79 ಎಸೆತಗಳಲ್ಲಿ 72 ರನ್ಗಳಿಸಿ ಔಟಾದರು. ಅನುಭವಿ ಪೆರ್ರಿ ಅಜೇಯ 26, ಬೆತ್ ಮೂನಿ ಅಜೇಯ 23 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಾಯಕಿ ಬಿಸ್ಮಾ ಮರೂಫ್(78) ಮತ್ತು ಅಲಿಯಾ ರಿಯಾಜ್(53) ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ಗಳಿಸಿತ್ತು.
ಅಲಾನ ಕಿಂಗ್ 9 ಓವರ್ಗಳಲ್ಲಿ 24ಕ್ಕೆ 2, ಮೇಗನ್ ಶೂಟ್, ಪೆರ್ರಿ, ಅಮಂಡ ವೆಲ್ಲಿಂಗ್ಟನ್ ಮತ್ತು ನಿಕೋಲಾ ಕ್ಯಾರಿ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:'ಇದು ಸೂಕ್ತ ಸಮಯವಾಗಿರಲಿಲ್ಲ'..ವಾರ್ನ್ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಪಶ್ಚಾತ್ತಾಪ ಪಟ್ಟ ಗವಾಸ್ಕರ್!