ಮುಂಬೈ(ಮಹಾರಾಷ್ಟ್ರ): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮೊನಚಿನ ಬೌಲಿಂಗ್ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಂದು ಗೆಲುವು ದಾಖಲಿಸಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ 8 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.
ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಮುಂಬೈ ಇಂಡಿಯನ್ಸ್ ತಂಡದ ಮಾರಕ ಬೌಲಿಂಗ್ ಸುಳಿಗೆ ಸಿಲುಕಿದ ದೆಹಲಿ ಬ್ಯಾಟರ್ಗಳಿಂದ ನಿರೀಕ್ಷಿತ ರನ್‌ಗಳು ಬರಲಿಲ್ಲ.
ಮೆಗ್ ಲ್ಯಾನಿಂಗ್ (43) ಮತ್ತು ಜೆಮಿಮಾ ರೋಡ್ರಿಗಸ್ (25), ಹಾಗೂ ರಾಧಾ ಯಾದವ್ (10) ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ಗಳಿಗೆ ಒಂದಂಕಿ ಗಡಿ ದಾಟಲೂ ಕೂಡ ಸಾಧ್ಯವಾಗಲಿಲ್ಲ. ಶಫಾಲಿ ವರ್ಮಾ 2 ರನ್, ಅಲಿಸ್ ಕ್ಯಾಪ್ಸಿ 6, ಮರಿಝನ್ನ್ ಕಪ್ಪ್ 2, ಜೊನಾಸ್ಸೆನ್ 2, ತಾನಿಯಾ ಭಾಟಿಯಾ 4, ಶಿಖಾ ಪಾಂಡೆ 4* ರನ್ ಗಳಿಸಿದರೆ, ಮಿನ್ನು ಮನಿ ಹಾಗೂ ತಾರಾ ನೊರಿಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರಿಂದ ದೆಹಲಿ ಕ್ಯಾಪಿಟಲ್ಸ್ 18 ಓವರ್ಗಳಿಗೆ ಕೇವಲ 105 ರನ್‌ಗಳು ಕಲೆ ಹಾಕಿ ಸರ್ವಪತನ ಕಂಡಿತು. ಮುಂಬೈ ಪರ ಹೇಲಿ ಮ್ಯಾಥ್ಯೂಸ್, ಸೈಕಾ ಇಷ್ಕು ಹಾಗೂ ಇಸ್ಯಾ ವಾಂಗ್ ಕರಾರುವಾಕ್ ದಾಳಿ ಬೌಲಿಂಗ್ ಪ್ರದರ್ಶನ ತೋರಿದರು. ಮೂವರೂ ಕೂಡ ತಲಾ ಮೂರು ವಿಕೆಟ್ಗಳನ್ನು ಕಿತ್ತು ಮಿಂಚಿದರು. ಪೂಜಾ ವಸ್ತ್ರೇಕರ್ ಒಂದು ವಿಕೆಟ್ ಪಡೆದರು.
106 ರನ್ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 2 ವಿಕೆಟ್ಗಳ ಕಳೆದುಕೊಂಡು ಜಯದ ಕೇಕೆ ಹಾಕಿತು. 15 ಓವರ್ಗಳಲ್ಲೇ ಮುಂಬೈ ಆಟಗಾರ್ತಿಯರು 109 ರನ್ ಬಾರಿಸಿದರು. ಆರಂಭಿಕರಾದ ಯಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ ಉತ್ತಮ ಆರಂಭ ಒದಗಿಸಿ ಗೆಲುವನ್ನು ಸುಲಭವಾಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 65 ರನ್ಗಳ ಜೊತೆಯಾಟ ನೀಡಿತು. 32 ಎಸೆತಗಳಲ್ಲಿ ಎಂಟು ಭರ್ಜರಿ ಬೌಂಡರಿಗಳೊಂದಿಗೆ ಯಸ್ತಿಕಾ ಭಾಟಿಯಾ 41 ರನ್ ಬಾರಿಸಿದರು. ಇನ್ನೊಂದೆಡೆ ಹೇಲಿ ಮ್ಯಾಥ್ಯೂಸ್ 31 ಬಾಲ್ಗಳಲ್ಲಿ ಆರು ಬೌಂಡರಿಗಳ ಸಮೇತ 32 ರನ್ ಗಳಿಸಿ ಔಟಾದರು.
ಆರಂಭಿಕರ ವಿಕೆಟ್ ಪತನದ ಬಳಿಕ ಜೊತೆಯಾದ ನ್ಯಾಟ್ ಸ್ಕಿವರ್ ಬ್ರಂಟ್ (23) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (11) ಅಜೇಯ ಆಟವಾಡಿ ತಂಡವನ್ನು ಗೆಲ್ಲಿಸಿದರು. ದೆಹಲಿ ಪರ ಆಲಿಸ್ ಕ್ಯಾಪ್ಸಿ ಹಾಗೂ ತಾರಾ ನಾರ್ರಿಸ್ ತಲಾ ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಆಡಿರುವ ಮೂರು ಪಂದ್ಯಗಳಲ್ಲೂ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುನ್ನುಗ್ಗುತ್ತಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಮೂರು ಪಂದ್ಯಗಳಲ್ಲಿ ಮೊದಲ ಸೋಲು ಕಂಡಿದ್ದು, ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್: ಖವಾಜಾ ಶತಕ, ಗ್ರೀನ್ ಅರ್ಧಶತಕಕ್ಕೆ ಒಂದೇ ಹೆಜ್ಜೆ ಬಾಕಿ