ಮೆಲ್ಬೋರ್ನ್ : ಕಳೆದ ತಿಂಗಳಷ್ಟೇ ಇಂಗ್ಲೆಂಡ್ ಪುರುಷರ ತಂಡ 0-4ರಲ್ಲಿ ಆ್ಯಶಸ್ ಸರಣಿ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು. ಇದೀಗ ಮಹಿಳಾ ತಂಡವೂ ಕೂಡ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಬಹು ಸ್ವರೂಪ ಆ್ಯಶಸ್ನಲ್ಲಿ ಇನ್ನು ಒಂದು ಏಕದಿನ ಪಂದ್ಯ ಇರುವಂತೆಯೇ 4-10 ಅಂಕಗಳ ಅಂತರದಿಂದ ಹೀನಾಯ ಸೋಲು ಕಂಡಿದೆ.
ಬಹು ಸ್ವರೂಪ ಸರಣಿಯಲ್ಲಿ ಒಂದು ಟೆಸ್ಟ್, ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳಿದ್ದವು. ಟಿ20 ಸರಣಿಯಲ್ಲಿ 2 ಪಂದ್ಯಗಳು ರದ್ದಾಗಿದ್ದರಿಂದ ಆಸ್ಟ್ರೇಲಿಯಾ 1-0ಯಲ್ಲಿ ಜಯಿಸಿದರೆ, 4-2 ಅಂಕಗಳನ್ನು ಪಡೆದಿತ್ತು. ನಂತರ ನಡೆದ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರಿಂದ 2 ತಂಡಗಳೂ ತಲಾ 2 ಅಂಕಗಳನ್ನು ಹಂಚಿಕೊಂಡಿದ್ದವು. ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ 6-4 ಅಂಕಗಳ ಮುನ್ನಡೆಯಲ್ಲಿತ್ತು.
ಆದರೆ, ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಆ್ಯಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆಸೀಸ್ ಮಹಿಳಾ ತಂಡ, ಇದೀಗ 2ನೇ ಏಕದಿನ ಪಂದ್ಯವನ್ನು ಗೆದ್ದು ಅಧಿಕೃತವಾಗಿ ಆ್ಯಶಸ್ ಸರಣಿಯನ್ನು 10-4 ಅಂಕಗಳ ಅಂತರದಿಂದ ವಶಪಡಿಸಿಕೊಂಡಿದೆ.
ಕೊನೆಯ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೂ 2 ಅಂಕಗಳನ್ನು ಮಾತ್ರ ಗಳಿಸಿಕೊಳ್ಳುವುದರಿಂದ ಆ್ಯಶಸ್ ಆಸ್ಟ್ರೇಲಿಯಾ ತಂಡದಲ್ಲೇ ಉಳಿದುಕೊಳ್ಳಲಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 129 ರನ್ಗಳಿಗೆ ಆಲೌಟ್ ಆಗಿತ್ತು. ಸೋಫಿ ಎಕ್ಲೆಸ್ಟೋನ್ 32 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
130 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 35.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಎಲಿಸ್ ಪೆರ್ರಿ 40 ರನ್ಗಳಿಸಿದರೆ, ಆ್ಯಶ್ ಗಾರ್ಡ್ನರ್ ಅಜೇಯ 31 ರನ್ಗಳಿಸಿದ್ದರು.
ಇದನ್ನೂ ಓದಿ:ವಿಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ಗಳ ಜಯ : ಗೆಲುವಿನೊಂದಿಗೆ ರೋಹಿತ್ ಯುಗ ಆರಂಭ