ಓವಲ್: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಜಸ್ಪ್ರೀತ್ ಬುಮ್ರಾ ಮೊದಲ ಪಂದ್ಯದಲ್ಲೇ ಮಿಂಚು ಹರಿಸಿ, ಆರು ವಿಕೆಟ್ ಕಬಳಿಸಿದ್ದಾರೆ. ಈ ಮಾರಕ ವೇಗಿಯ ಅಪಾಯಕಾರಿ ಬೌಲಿಂಗ್ ಹೇಗಿತ್ತು ಎಂದರೆ, ಅವರು ನಾಲ್ವರು ಪ್ರಬಲ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಅಚ್ಚರಿ ರೀತಿಯಲ್ಲಿ ಪೆವಿಲಿಯನ್‌ಗಟ್ಟಿದ್ದರು. 19 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ತಂತ್ರಗಾರಿಕೆಯ ಕುರಿತು ಮಾತನಾಡಿದ ಬುರ್ಮಾ, "ಮೊದಲ ಓವರ್ ಹೇಗೆ ಬೌಲ್ ಮಾಡಬೇಕು ಎಂಬುದನ್ನು ನೋಡಿದ ನಂತರವೇ ನಾವು ಮತ್ತು ಶಮಿ ತಂತ್ರ ರೂಪಿಸಿದ್ದೆವು" ಎಂದು ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿ, "ವೈಟ್ ಬಾಲ್ ಸ್ವಿಂಗ್ ಮತ್ತು ಸೀಮ್ ಆಗುವುದನ್ನು ಗಮನಿಸಿದೆ. ನಾನು ಮೊದಲ ಎಸೆತ ಎಸೆದಾಗ ನನಗೆ ಸ್ವಲ್ಪ ಸ್ವಿಂಗ್ ಸಿಕ್ಕಿತು ಮತ್ತು ಅದರ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸಿದೆ. ಹಾಗಾಗಿ ಮಹಮ್ಮದ್ ಶಮಿ ಜೊತೆ ಮಾತುಕತೆ ನಡೆಸಿ ನಾವಿಬ್ಬರೂ ಟೆಸ್ಟ್ ಪಂದ್ಯದ ಲೆಂಗ್ತ್‌ನಲ್ಲಿ ಬೌಲ್ ಮಾಡಲು ನಿರ್ಧರಿಸಿದೆವು" ಎಂದರು.
ಇದನ್ನೂ ಓದಿ: ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ಹಿಂದಿಕ್ಕಿದ ಭಾರತ
"ನಾವಿಬ್ಬರೂ ಆಡುವಾಗ ಯಾವಾಗಲೂ ಮಾತುಕತೆ ನಡೆಸುವ ಅಭ್ಯಾಸವಿದೆ. ಪಂದ್ಯದಲ್ಲಿ ಬಾಲ್ ಸ್ವಿಂಗ್ ಮತ್ತು ಸೀಮ್ ನೀಡುತ್ತಿರುವಾಗ ನನ್ನ ಸಹ ಆಟಗಾರನ ಜೊತೆ ಮಾತುಕತೆ ನಡೆಸಿಯೇ ತಂತ್ರ ರೂಪಿಸುತ್ತೇನೆ. ಬಳಿಕ ತಂಡವನ್ನು ಸಾಧ್ಯವಾದಷ್ಟು ಉತ್ತಮ ಸ್ಥಿತಿಯಲ್ಲಿರಿಸಲು ಏನು ಮಾಡಬೇಕೆಂದು ಚರ್ಚಿಸುತ್ತೇವೆ. ಇದೇ ರೀತಿ ಜೊತೆಗೂಡಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಸಾಧ್ಯವಾಯಿತು" ಎಂದು ಬುಮ್ರಾ ವಿವರಿಸಿದರು.