ನವದೆಹಲಿ: ಭಾರತ ಕ್ರಿಕೆಟ್ ತಂಡದ ಮೂವರು ಆಟಗಾರರು ಗಾಯದ ಕಾರಣ ಹೊರಗುಳಿದಿರುವುದು ಭವಿಷ್ಯದ ಮಹತ್ವದ ಸರಣಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಗೋಚರಿಸಿದೆ. ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕಳೆದ ಕೆಲವು ಪ್ರಮುಖ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಲ್ಲದೇ, ಐಪಿಎಲ್ನ 16ನೇ ಆವೃತ್ತಿಯಿಂದಲೂ ಅಭಿಮಾನಿಗಳು ಈ ಸ್ಟಾರ್ ಆಟಗಾರರ ಪ್ರದರ್ಶನವನ್ನು ಮಿಸ್ ಮಾಡಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡ ಮುಂದಿನ ದಿನಗಳಲ್ಲಿ ಮಹತ್ವದ ಸರಣಿಗಳನ್ನು ಎದುರಿಸಲಿದ್ದು, ಈ ಮೂವರ ಬದಲಿಗೆ ಸಮರ್ಥ ಆಟಗಾರರನ್ನು ಹುಡುಕುವ ತಲೆನೋವು ಆಯ್ಕೆಗಾರರದ್ದು. ಪಂತ್ ಪ್ರಸ್ತುತ ವರ್ಷ ಬ್ಯಾಟ್ ಹಿಡಿಯುವುದು ಅನುಮಾನ. ಅಯ್ಯರ್ ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಅವರು ಮುಂದಿನ 5 ತಿಂಗಳು ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ ಎಂದೇ ಹೇಳಲಾಗಿದೆ. ಬೂಮ್ರಾ ಈಗಾಗಲೇ ನ್ಯೂಜಿಲೆಂಡ್ನಲ್ಲಿ ಚಿಕಿತ್ಸೆ ಪಡೆದಿದ್ದು, ತಂಡಕ್ಕೆ ಯಾವಾಗ ಮರಳುತ್ತಾರೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ.
16ನೇ ಆವೃತ್ತಿಯ ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡೆಯಲಿದೆ. ಡಬ್ಲ್ಯೂಟಿಸಿಯ ಫೈನಲ್ ಪಂದ್ಯ ಇಂಗ್ಲೆಂಡ್ನ ಓವೆಲ್ ಮೈದಾನದಲ್ಲಿ ನಿಗದಿಯಾಗಿದ್ದು, ಜೂನ್ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ಪ್ರಶಸ್ತಿ 'ಗದೆ'ಗಾಗಿ ಹೋರಾಡಲಿದೆ. ಇದರ ನಂತರ ಏಕದಿನ ಮಾದರಿಯ ಏಷ್ಯಾ ಕಪ್ ಹಾಗೂ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಕೂಡಾ ನಡೆಯಲಿದೆ. ಈ ಮಹತ್ವದ ಪಂದ್ಯಗಳಿಗೆ ಯಾರೆಲ್ಲಾ ಲಭ್ಯರಾಗುತ್ತಾರೆ ಎಂದು ಹೇಳುವುದು ಕಷ್ಟ.
ಇವರ ಬದಲಿ ಆಟಗಾರರನ್ನು ಭಾರತ ಆಯ್ಕೆ ಮಾಡಿಕೊಳ್ಳುವ ಅಗತ್ಯವೂ ಇದೆ. ಐಪಿಎಲ್ನಿಂದ ಹೊಸ ಪ್ರತಿಭೆಗಳು ಟೀಂ ಇಂಡಿಯಾದ ಕದ ತಟ್ಟುತ್ತಾರಾ ಅಥವಾ ಕೆಲವು ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆಟಗಾರರೇ ಇವರ ಸ್ಥಾನಕ್ಕೆ ಬರುತ್ತಾರಾ ಎಂಬುದು ಪ್ರಶ್ನೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅಯ್ಯರ್ ಮತ್ತು ಬೂಮ್ರಾ ಸ್ಥಾನವನ್ನು ಯಾರು ಭರ್ತಿ ಮಾಡುವರು ಎಂಬುದನ್ನು ಕಾದು ನೋಡಬೇಕಿದೆ. ಬೂಮ್ರಾ ಜೂನ್ ವೇಳೆಗೆ ಮೈದಾನಕ್ಕಿಳಿಯವ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.
ಈಗ ಭಾರತದ ಮುಂದೆ ಬ್ಯಾಟರ್ಗಳಲ್ಲಿ ಮಧ್ಯಮ ಕ್ರಮಾಂಕಕ್ಕೆ ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ಹನುಮ ವಿಹಾರಿ ನಡುವೆ ಸ್ಪರ್ಧೆ ಇದೆ. ಸಂಜು ಸ್ಯಾಮ್ಸನ್ ಭಾರತಕ್ಕಾಗಿ ಆಡಿರುವ ಅನುಭವ ಹೊಂದಿದ್ದಾರೆ. ಇವರನ್ನು ಆಯ್ಕೆಗಾರರು ಕಡೆಗಣಿಸುತ್ತಿದ್ದಾರೆ ಎಂಬ ದೂರು ಅಭಿಮಾನಿಗಳದ್ದು. ಹಾಗಾಗಿ, ಈಗ ಬಿಟ್ಟ ಸ್ಥಳ ತುಂಬಲಾದರೂ ಅವರನ್ನು ತಂಡಕ್ಕೆ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.
ಸೂರ್ಯ ಕುಮಾರ್ ಯಾದವ್: ಶ್ರೇಯಸ್ ಅಯ್ಯರ್‌ಗೆ ಪರ್ಯಾಯವಾಗಿ ಸೂರ್ಯ ಕುಮಾರ್ ಯಾದವ್ ಅವರನ್ನು ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಪ್ರಯೋಗಿಸಲಾಗುವುದು ಎಂದು ಟೀಮ್ ಮ್ಯಾನೇಜ್‌ಮೆಂಟ್ ಈಗಾಗಲೇ ಘೋಷಿಸಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಆಡಿದ ಎಲ್ಲಾ ಮೂರು ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಕೊಟ್ಟು ಇವರು ಟೀಕೆಗೆ ಗುರಿಯಾಗಿದ್ದರು.
ಸೂರ್ಯ ಇದುವರೆಗೆ ಒಟ್ಟು ಒಂದು ಟೆಸ್ಟ್, 23 ಏಕದಿನ ಮತ್ತು 48 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 24.05 ರ ಸರಾಸರಿಯಲ್ಲಿ ಒಟ್ಟು 433 ರನ್ ಗಳಿಸಿದರೆ, ಟಿ20ಯಲ್ಲಿ 1,675 ರನ್ ಗಳಿಸುವ ಮೂಲಕ ವಿಶ್ವ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಆಗಿದ್ದಾರೆ.
ಸಂಜು ಸ್ಯಾಮ್ಸನ್: ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಟೀಮ್ ಇಂಡಿಯಾದಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಆಡಬಹುದು. ಸಂಜು ಇದುವರೆಗೆ ಟೀಂ ಇಂಡಿಯಾ ಪರ 11 ಏಕದಿನ ಹಾಗೂ 17 ಟಿ20 ಪಂದ್ಯಗಳೂ ಸೇರಿದಂತೆ ಒಟ್ಟು 28 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 66ರ ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. 17 ಟಿ20 ಪಂದ್ಯಗಳಲ್ಲಿ 20.06 ಸರಾಸರಿಯಲ್ಲಿ 301 ರನ್ ಗಳಿಸಿದ್ದಾರೆ.
ಹನುಮ ವಿಹಾರಿ: ಹನುಮ ವಿಹಾರಿ ಮಧ್ಯಮ ಕ್ರಮಾಂಕದ ಬ್ಯಾಟರ್. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ನಂತರ ಒಂದೇ ಒಂದು ಟೆಸ್ಟ್ ಆಡಿಲ್ಲ. 2020-21ರಲ್ಲಿ ಆಡಿದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದರು. ವಿದೇಶಿ ಪಿಚ್‌ಗಳಲ್ಲಿ ಆಸ್ಟ್ರೇಲಿಯಾದ ವೇಗಿಗಳ ದಾಳಿಯನ್ನು ಆಡಿದ ಅನುಭವ ಅವರಿಗಿದೆ. ಹೀಗಾಗಿ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಇವರಿಗೆ ಸ್ಥಾನ ಸಿಗುವ ಸಾಧ್ಯತೆಯೂ ಇದೆ. ಇವರು ಭಾರತದ ಪರ ಒಟ್ಟು 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1 ಶತಕ ಮತ್ತು ಐದು ಅರ್ಧ ಶತಕ ಸೇರಿದಂತೆ 839 ರನ್ ಗಳಿಸಿದ್ದಾರೆ. ಇದರೊಂದಿಗೆ ಬೌಲಿಂಗ್ನಲ್ಲಿ 5 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಕೇನ್ ವಿಲಿಯಮ್ಸನ್ ಬದಲಿಗೆ ಗುಜರಾತ್ ಸೇರಿದ ದಸುನ್ ಶನಕಾ