ದುಬೈ : ವಿರಾಟ್ ಕೊಹ್ಲಿ ವೈಟ್-ಬಾಲ್ ಕ್ರಿಕೆಟ್ ನಾಯಕತ್ವದಿಂದ ಹಿಂದೆ ಸರಿಯುವ ಬಗ್ಗೆ ನನ್ನೊಂದಿಗೆ ಈ ಹಿಂದೆಯೇ ಮಾತನಾಡಿದ್ದರು. ಅಲ್ಲದೆ, ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯುವ ಉತ್ಸುಕರಾಗಿದ್ದರು. ಆದರೆ, ಕ್ಯಾಪ್ಟನ್ಸಿಯಿಂದ ದಿಢೀರ್ ಕೆಳಗಿಳಿದ ಅವರ ನಡೆ ನನಗೆ ಬಹಳ ಆಶ್ಚರ್ಯ ತಂದಿತ್ತು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಈ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರ್ತಿ, ಕಾಮೆಂಟೇಟರ್ ಇಶಾ ಗುಹಾ ನಡೆಸಿದ 'ದಿ ಐಸಿಸಿ ರಿವೀವ್'ನಲ್ಲಿ ಮಾತನಾಡಿರುವ ರಿಕಿ, ಕಳೆದ ಐಪಿಎಲ್ ಮೊದಲ ಅವಧಿಯಲ್ಲಿ ಸಂದರ್ಭದಲ್ಲಿ ನಾನು ಹಾಗೂ ವಿರಾಟ್ ಕೆಲಕಾಲ ಸಂಭಾಷಣೆ ನಡೆಸಿದ್ದೆವು. ಆಗ ಟೆಸ್ಟ್ ನಾಯಕತ್ವದ ಬಗ್ಗೆ ಮಾತನಾಡಿದ್ದರು.
ಅವರು ಟೆಸ್ಟ್ ನಾಯಕತ್ವ ನಿರ್ವಹಣೆ ಹಾಗೂ ಆ ಹುದ್ದೆಯನ್ನು ತುಂಬಾ ಪ್ರೀತಿಸುತ್ತಿದ್ದರು. ಕೊಹ್ಲಿ ಮುಂದಾಳತ್ವದಲ್ಲಿ ಭಾರತೀಯ ಟೆಸ್ಟ್ ತಂಡವು ಸಾಕಷ್ಟು ಸಾಧಿಸಿದೆ. ಆದರೆ, ಅವರು ನಾಯಕತ್ವ ತ್ಯಜಿಸಿರುವುದನ್ನು ಕೇಳಿ ಬಹಳ ಆಶ್ಚರ್ಯವಾಯಿತು ಎಂದಿದ್ದಾರೆ.
ವಿರಾಟ್ ತಂಡದ ಗೆಲುವಿಗಾಗಿ ಸದಾ ಶ್ರಮಿಸುತ್ತಿದ್ದರು. ಭಾರತೀಯ ಕ್ರಿಕೆಟ್ ಬೆಳವಣಿಗೆಗೆ ಎಷ್ಟು ಭಾವೋದ್ರಿಕ್ತರಾಗಿ ಆಡುತ್ತಾರೆ ಎಂಬುದನ್ನು ನೀವು ತಿಳಿಯಬೇಕೆಂದರೆ ದಿನದಾಟದಲ್ಲಿ ಕೇವಲ ಒಂದು ಗಂಟೆಯ ನೋಡಿದರೆ ತಿಳಿಯುತ್ತದೆ.
ಅವರು ಏಕಾಏಕಿ ನಾಯಕತ್ವದಿಂದ ದೂರ ಸರಿದಿದ್ದು, ಆಶ್ಚಯ ತಂದರೂ ಕೂಡ ಬಳಿಕ ನಾನು ನನ್ನ ನಾಯಕತ್ವದ ದಿನಗಳನ್ನು ನೆನಪು ಮಾಡಿಕೊಂಡೆ. ನಾನು ಬಹುಶಃ ಅಂದುಕೊಂಡಿದ್ದಕ್ಕಿಂತ ಕೆಲ ವರ್ಷ ಹೆಚ್ಚು ನಾಯಕನಾಗಿ ಆಡಿದ್ದೇನೆ ಎಂದನಿಸಿದೆ ಎಂದು ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾಯಕರು ಮತ್ತು ತರಬೇತುದಾರರಿಗೆ ಅವರದೇ ಆದ ಜೀವನವೂ ಇರುತ್ತದೆ. ವಿರಾಟ್ ಈಗಾಗಲೇ ಸುಮಾರು ಏಳು ವರ್ಷಗಳ ಕಾಲ ನಾಯಕರಾಗಿದ್ದಾರೆ. ನಾಯಕತ್ವ ನಿರ್ವಹಣೆಗೆ ಜಗತ್ತಿನಲ್ಲೇ ಸವಾಲಿನ ದೇಶವೆಂದರೆ ಅದು ಭಾರತ.
ಏಕೆಂದರೆ, ಅಲ್ಲಿನ ಕ್ರಿಕೆಟ್ನ ಜನಪ್ರಿಯತೆಯೇ ಅಷ್ಟರಮಟ್ಟಿಗಿದೆ. ದೇಶದ ಪ್ರತಿಯೊಬ್ಬನೂ ಕೂಡ ಭಾರತೀಯ ಕ್ರಿಕೆಟ್ ತಂಡದ ಯಶಸ್ಸನ್ನು ಎದುರು ನೋಡುತ್ತಾನೆ. ಅದೆಲ್ಲವೂ ಕೂಡ ಗಣನೆಗೆ ಬರುತ್ತದೆ ಎಂದು ರಿಕಿ ಮಾತನಾಡಿದ್ದಾರೆ.
ವಿರಾಟ್ ನಾಯಕತ್ವಕ್ಕೂ ಮುನ್ನ ಭಾರತ ತಂಡವು ಸ್ವದೇಶದಲ್ಲಿ ಬಹಳಷ್ಟು ಪಂದ್ಯಗಳಲ್ಲಿ ಗೆದ್ದರೆ, ವಿದೇಶದಲ್ಲಿ ಅಷ್ಟೊಂದು ಯಶಸ್ಸು ಸಾಧಿಸಿರಲಿಲ್ಲ. ಭಾರತವು ವಿದೇಶದಲ್ಲೂ ಹೆಚ್ಚಿನ ಪಂದ್ಯ ಗೆದ್ದಿರುವ ಸಾಧನೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೂಡಿ ಬಂದಿವೆ. ಇದು ನಿಜಕ್ಕೂ ಭಾರತೀಯ ಕ್ರಿಕೆಟ್ ಹೆಮ್ಮೆಪಡುವ ಸಂಗತಿಯಾಗಿದೆ.
ಅಲ್ಲದೆ, ವಿರಾಟ್ ನಾಯಕನಾದ ಬಳಿಕ ಬಿಸಿಸಿಐ ಕೂಡ ಟೆಸ್ಟ್ ಕ್ರಿಕೆಟ್ ಬಗ್ಗೆ ಹೆಚ್ಚಿನ ಒತ್ತು ನೀಡಿತ್ತು. ಇದೂ ಕೂಡ ತಂಡವು ವಿದೇಶಗಳಲ್ಲೂ ಗೆಲುವು ಸವಿಯಲು ಸಹಕಾರಿಯಾಗಿದೆ. ವಿರಾಟ್ ದಾಖಲೆ ನೋಡಿದರೆ, ಅವರು ಖಂಡಿತವಾಗಿಯೂ ಹೆಮ್ಮೆಪಡಲೇಬೇಕು ಎಂದು ಪಾಂಟಿಂಗ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಭಾರತ ತಂಡವನ್ನು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದರು. ಅವರ ಮುಂದಾಳತ್ವದಲ್ಲಿ ತಂಡವು ಅಕ್ಟೋಬರ್ 2016ರಿಂದ ಮಾರ್ಚ್ 2020ರ ನಡುವೆ ಸತತ 42 ತಿಂಗಳುಗಳ ಕಾಲ ಅಗ್ರಸ್ಥಾನದಲ್ಲಿತ್ತು. 68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ, 40ರಲ್ಲಿ ಗೆಲುವು ಸಾಧಿಸಿ ದೀರ್ಘ ಮಾದರಿಯಲ್ಲಿ ಅತಿ ಹೆಚ್ಚು ಟೆಸ್ಟ್ ಗೆದ್ದ ನಾಯಕರಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ ಹೋಲ್ಡರ್.. ಇಂಗ್ಲೆಂಡ್ ವಿರುದ್ಧ T-20 ಸರಣಿ ಗೆದ್ದ ವಿಂಡೀಸ್