ಸೇಂಟ್ ಲೂಸಿಯಾ: ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ 4-1ರಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಶನಿವಾರ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆದ ವಿಂಡೀಸ್ 16 ರನ್ಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಕೆರಿಬಿಯನ್ ಪಡೆ20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಆಸೀಸ್ ಬೌಲರ್ಗಳನ್ನು ಬೆಂಡೆತ್ತಿದ ಎವಿನ್ ಲೂಯಿಸ್ ಕೇವಲ 34 ಎಸೆತ 4 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರು. ಇವರಿಗೆ ನೆರವು ನೀಡಿದ ಗೇಲ್ 21, ಸಿಮೊನ್ಸ್ 21 ಹಾಗೂ ಪೂರನ್ 31 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಆಸ್ಟ್ರೇಲಿಯಾ ಪರ ಆ್ಯಂಡ್ರ್ಯೂ ಟೈ 37ಕ್ಕೆ 3, ಜಂಪಾ 30ಕ್ಕೆ 2, ಮಿಚೆಲ್ ಮಾರ್ಷ್ 12ಕ್ಕೆ 2 ವಿಕೆಟ್ ಪಡೆದರು.
200 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ರಸೆಲ್ ಮತ್ತು ಕಾಟ್ರೆಲ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ರನ್ಗಳಿಸಲಷ್ಟೇ ಶಕ್ತವಾಯಿತು.
ನಾಯಕ ಆ್ಯರೋನ್ ಫಿಂಚ್ 23 ಎಸೆತಗಳಲ್ಲಿ 34, ಮ್ಯಾಥ್ಯೂ ವೇಡ್ 26 ಮತ್ತು ಮಿಚೆಲ್ ಮಾರ್ಷ್ 15 ಎಸೆತಗಳಲ್ಲಿ 30 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದ ಬ್ಯಾಟ್ಸ್ಮನ್ಗಳ ವೈಫಲ್ಯ ಅನುಭವಿಸಿದ್ದರಿಂದ 16 ರನ್ಗಳ ಸೋಲು ಕಂಡಿತು.
ಶೆಲ್ಡಾನ್ ಕಾಟ್ರೆಲ್ 28ಕ್ಕೆ 3, ಆ್ಯಂಡ್ರೆ ರಸೆಲ್ 43ಕ್ಕೆ 3, ಹೇಡನ್ ವಾಲ್ಶ್ 43ಕ್ಕೆ 1 ವಿಕೆಟ್ ಪಡೆದರು. ಕ್ರಿಸ್ ಗೇಲ್ 3 ಓವರ್ಗಳಲ್ಲಿ ಕೇವಲ 9 ರನ್ ಬಿಟ್ಟುಕೊಟ್ಟು ಆಸೀಸ್ ರನ್ಗಳಿಗೆ ಕಡಿವಾಣ ಹಾಕಿದರು.