ಲಂಡನ್: ಓವಲ್‌ನಲ್ಲಿ ಭಾರತ ಮತ್ತು ಇಂಗ್ಲಂಡ್ ನಡುವೆ 4ನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ ನಡೆಯುತ್ತಿದ್ದು ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಲಿದೆ ಎಂದು ವೇಗಿ ಉಮೇಶ್ ಯಾದವ್ ಭರವಸೆ ವ್ಯಕ್ತಪಡಿಸಿದ್ದಾರೆ.
ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಂ ಇಂಡಿಯಾ ಪ್ರತಿದಾಳಿಯಾಗಿ ದಿಟ್ಟತನದ ಹೋರಾಟ ಮಾಡುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಅಂಗಳದಲ್ಲಿ ಭಾರತದ ಭರವಸೆಯ ಆಟಗಾರರು ಇನ್ನು ಆಡುತ್ತಿದ್ದಾರೆ. ಈ ದಿನದ ಆಟ ತಂಡದ ಪಥವನ್ನೇ ಬದಲಿಸಿದೆ ಎಂದರು.
ಮೊದಲ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ತೇವಾಂಶವಿತ್ತು. ಹಾಗಾಗಿ ಬೌಲಿಂಗ್ ಸ್ವಲ್ಪ ಭಿನ್ನವಾಗಿಯೇ ಮಾಡಬೇಕಾಯಿತು. ವಿರೋಧಿ ತಂಡ ನಮ್ಮ ಉತ್ತಮ ಬೌಲಿಂಗ್ ನಡುವೆಯೂ ಇಂದು ಸ್ವಲ್ಪ ಚುರುಕಿನ ಆಟ ಆಡಿತು. ಪ್ರತಿಯಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಮಾಡಿದೆ. ಉತ್ತಮ ಸ್ಕೋರ್ ಮಾಡುವ ಭರವಸೆ ಇದೆ ಎಂದು ಉಮೇಶ್ ಯಾದವ್ ಬ್ಯಾಟಿಂಗ್ ಬಲದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.
’ರನ್ಬಿಟ್ಟುಕೊಟ್ಟ ಬಗ್ಗೆ ಬೇಸರವಿದೆ’
ಮಧ್ಯಮ ಹಂತದಲ್ಲಿ ರನ್ಗಳನ್ನು ಬಿಟ್ಟುಕೊಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಮೇಶ್, 40 ನಿಮಿಷಗಳಲ್ಲಿ ನಾವು 2 ವಿಕೆಟ್‌ಗಳನ್ನು ತೆಗೆದುಕೊಂಡೆವು. ಇದು ಆಂಗ್ಲರ ಓಟಕ್ಕೆ ಬ್ರೇಕ್ ನೀಡಿತು. ಆದರೆ, ಬಳಿಕ ಬಂದ ಆಂಗ್ಲ ಆಟಗಾರರು ನಮ್ಮ ಬೌಲಿಂಗ್ ಲಯವನ್ನು ಅರ್ಥ ಮಾಡಿಕೊಂಡು ಆಡಿದರು. ಹಾಗಾಗಿ ಅಲ್ಲಿ ಸ್ವಲ್ಪ ರನ್ ಬಿಟ್ಟುಕೊಡಬೇಕಾಯಿತು ಎಂದು ಎಡವಿದ ಹಾದಿ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್ ಗಳಿಸಿತ್ತು. ಇಂಗ್ಲೆಂಡ್ ಪ್ರತಿಯಾಗಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 290 ರನ್ ಗಳಿಸಿತು. ಅನುಭವಿ ಒಲಿ ಪೋಪ್ (81) ಮತ್ತು ಕ್ರಿಸ್ ವೋಕ್ಸ್ (50) ಅವರ ನಾಜೂಕಿನ ಹೊಡೆತದಿಂದ ಇಂಗ್ಲಂಡ್ ತಂಡ 99 ರನ್ ಮುನ್ನಡೆ ಸಾಧಿಸಿದೆ. ಭಾರತ 108ಕ್ಕೆ 1 ವಿಕೆಟ್ ಕಳೆದುಕೊಂಡಿದೆ.
9 ತಿಂಗಳ ಬಳಿಕ ತನ್ನ ಮೊದಲ ಟೆಸ್ಟ್ ಆಡುತ್ತಿರುವ ಉಮೇಶ್, 76ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ತಂಡದ ಭರಸವೆಯ ಬೌಲರ್ ಆದರು. 4ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್ ಗಳಿಸಿದ ಡೇವಿಡ್ ಮಲಾನ್ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ಅತ್ಯಂತ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 150 ವಿಕೆಟ್ ಪಡೆಯುವ ಮೂಲಕ ದಾಖಲೆಯನ್ನೂ ಬರೆದರು.