ದುಬೈ: 2021ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಮೊದಲು ಬ್ಯಾಟಿಂಗ್ ಮಾಡಿದ ಎರಡೂ ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರಿಂದ ನಾವೂ ಕೂಡ ಅವರಿಗೆ ಮೊದಲು ಬ್ಯಾಟಿಂಗ್ ಕಷ್ಟವಾಗಬಹುದೆಂದು ನಿರ್ಧರಿಸಿ ಬ್ಯಾಟಿಂಗ್ ಬದಲು ಬೌಲಿಂಗ್ ಆಯ್ಕೆ ಮಾಡಿಕೊಂಡೆವು ಎಂದು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಸ್ತುತ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಾನು ಆಡಿದ್ದ ಮೊದಲ ಮೂರು ಪಂದ್ಯಗಳಲ್ಲೂ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತ್ತು. ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದರೆ, ಪಾಕಿಸ್ತಾನ ವಿರುದ್ಧ ಗೆಲುವಿನ ಸನಿಹ ಬಂದು ಸೋಲು ಕಂಡಿತ್ತು. ಇತ್ತ ಭಾರತ ತಂಡ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕ್ರಮವಾಗಿ 151 ಮತ್ತು 110 ರನ್ ಗಳಿಸಿತ್ತು. ಈ ಗುರಿಯನ್ನು ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿದರೆ, ಕಿವೀಸ್ 2 ವಿಕೆಟ್ ಕಳೆದುಕೊಂಡು ತಲುಪಿತ್ತು.
ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸಮಸ್ಯೆ ಅನುಭವಿಸಿದ್ದರು. ನಾವು ಕೂಡ ಸಾಮಾನ್ಯವಾಗಿ ವೈಫಲ್ಯ ಅನುಭವಿಸಿದ್ದ ಅವರ ಬ್ಯಾಟಿಂಗ್ ಮೇಲೆ ದಾಳಿ ಮಾಡಲು ನಿರ್ಧಿರಿಸಿದ್ದೆವು. ನಾವು ಇದರಲ್ಲಿ ಯಶಸ್ವಿಯಾಗಿದ್ದರೆ ಖಂಡಿತ ಈ ಪಂದ್ಯವನ್ನು ಗೆಲ್ಲುತ್ತಿದ್ದೆವು.
ಆದರೆ ಅವರೆಲ್ಲರು(ಭಾರತ) ವೃತ್ತಿಪರರು, ಅವರು ನಮ್ಮನ್ನು ಪಂದ್ಯದ ಯಾವುದೇ ಹಂತದಲ್ಲಿ ಮರಳುವುದಕ್ಕೆ ಬಿಡಲಿಲ್ಲ. ಅವರು ಉತ್ತಮವಾಗಿ ಆರಂಭಿಸಿದರು ಮತ್ತು ಅತ್ಯುತ್ತಮವಾಗಿ ಇನ್ನಿಂಗ್ಸ್ ಮುಗಿಸಿದರು. ಭಾರತೀಯ ಬ್ಯಾಟ್ಸ್ಮನ್ಗಳು ಒಮ್ಮೆ ಆಟವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರೆ ಅವರನ್ನು 200ಕ್ಕಿಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವುದು ಬಹಳ ಕಷ್ಟ. ಆದರೆ ಒಂದು ತಂಡವಾಗಿ ನಾವು ಅತ್ಯುತ್ತಮ ಪ್ರಯತ್ನ ಮಾಡಿದೆವು ಎಂದು ರಶೀದ್ ಖಾನ್ ಹೇಳಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿ 210 ರನ್ಗಳಿಸಿತ್ತು. ರೋಹಿತ್ ಶರ್ಮಾ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 74, ರಾಹುಲ್ 48 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ಸಹಿತ 74, ಪಂತ್ 13 ಎಸೆತಗಳಲ್ಲಿ ಅಜೇಯ 27, ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ ಅಜೇಯ 35 ರನ್ಗಳಿಸಿದ್ದರು. ಆದರೆ ಬಾಂಗ್ಲಾದೇಶ 144 ರನ್ಗಳಿಸಲಷ್ಟೇ ಶಕ್ತವಾಗಿ 66 ರನ್ಗಳ ಸೋಲು ಕಂಡಿತು.
ಅಫ್ಘಾನ್ ಪಡೆ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಸೆಮಿಫೈನಲ್ ದೃಷ್ಟಿಯಿಂದ ಈ ಎರಡೂ ತಂಡಕ್ಕಷ್ಟೇ ಅಲ್ಲದೆ ಭಾರತದ ಸೆಮಿಫೈನಲ್ ಪ್ರವೇಶವನ್ನು ನಿಯಂತ್ರಿಸಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ಗೆದ್ದರೆ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರ ಬೀಳಿಲಿದೆ.
ಇದನ್ನು ಓದಿ: ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಆರ್.ಅಶ್ವಿನ್ ಗುಣಮಟ್ಟ ಎಲ್ಲರೂ ನೋಡಿದರು: ರೋಹಿತ್ ಶರ್ಮಾ